

ಅರಸೀಕೆರೆ (ಗ್ರಾಮಾಂತರ) : ಏನು ಅರಿಯದ ಮುದ್ದು ಕಂದನನ್ನು ನಾವು ಶಾಲೆಗೆ ಸೇರಿಸುತ್ತೇವೆ. ಆ ಮಗುವನ್ನು ಪ್ರೀತಿಯಿಂದ ತಿದ್ದಿ ಮಗುವಿನಲ್ಲಿರುವ ಪ್ರತಿಭೆಗಳನ್ನು ಗುರುತಿಸಿ ಮಗುವಿಗೆ ಧೈರ್ಯ, ಸಹನೆ, ವಿನಯ, ಸಂಸ್ಕಾರ ಇವುಗಳನ್ನೆಲ್ಲ ತುಂಬಿ ಅವರನ್ನು ಉತ್ತಮ ಶಿಲೆಯನ್ನಾಗಿಸುವಲ್ಲಿ ಶಿಕ್ಷಕರೇ ಶಿಲ್ಪಿಗಳಾಗಿದ್ದಾರೆ ಎಂದು ಇಸಿಒ ಹರೀಶ್ ಅಭಿಪ್ರಾಯಪಟ್ಟರು.
ತಾಲೂಕಿನ ಬಾಣಾವರ ಪಟ್ಟಣದ ಜೀವನ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಯೋಜಿಸಲಾಗಿದ್ದ ಜೆಜೆಎಸ್ ಚಿಣ್ಣರ ಕಲರವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಿಆರ್‌ಪಿ ಪ್ರಿಯಾಂಕಾ ಮಾತನಾಡಿ, ಮಕ್ಕಳಿಗೆ ವಿದ್ಯೆಯೇ ಭೂಷಣ. ವಿದ್ಯೆ ಕಲಿತ ಮಕ್ಕಳು ಮುಂದಿನ ಜೀವನವನ್ನು ಉತ್ತಮವಾಗಿ ಸಾಗಿಸಬಹುದು. ವಿದ್ಯೆ ಯಾರೂ ಕದಿಯಲಾಗದ ಸಂಪತ್ತು. ತಂದೆ-ತಾಯಿಗಳು ತಮ್ಮ ಮಕ್ಕಳಿಗೆ ಯಾವ ಸಂಪತ್ತನ್ನು ಮಾಡದಿದ್ದರೂ ಪರವಾಗಿಲ್ಲ, ಮಕ್ಕಳಿಗೆ ವಿದ್ಯೆ ಎಂಬ ಸಂಪತ್ತನ್ನು ಕೊಡಿಸಿದರೆ ಆ ಸಂಪತ್ತು ಅವರ ಜೀವನ ಸಾಗಿಸಲು ಸಹಕಾರಿಯಾಗುತ್ತದೆ ಎಂದರು.
ಶಾಲೆಯ ಮುಖ್ಯ ಶಿಕ್ಷಕ ಶಿವಕುಮಾರ್ ಮಾತನಾಡಿ, ನಮ್ಮ ಶಾಲೆಯ ಶಿಕ್ಷಕರು ಮಕ್ಕಳಿಗೆ ಗುಣಮಟ್ಟದ ಬೋಧನೆ ಮಾಡುವ ಮೂಲಕ ಮಕ್ಕಳ ಪ್ರತಿಭೆಗಳನ್ನು ಹೊರ ತರುವಲ್ಲಿ ಯಶಸ್ವಿಯಾಗಿದ್ದಾರೆ. ಇದರಲ್ಲಿ ಪಾಲಕರ ಸಹಕಾರವೂ ಮುಖ್ಯ ಎಂದರು.
ಕಾಚಿಘಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭಾಗ್ಯಮ್ಮ ಸೋಮಲಿಂಗಪ್ಪ, ಬಾಣಾವರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವೀಣಾ ವಿಶ್ವನಾಥ್, ಸದಸ್ಯರಾದ ಶಿವಕುಮಾರ್, ಸಯ್ಯದ್ ಆಸಿಫ್, ಮಹೇಶ್, ಎಲ್.ಶೈಲಜಾ, ಕುಮಾರ್, ಸೀಮಾ, ರವಿಕುಮಾರ್, ಸಾಹಿತಿಗಳಾದ ಪ್ರಸನ್ನಕುಮಾರ್ ಸುರೆ, ಶಾಲೆ ನಿರ್ದೇಶಕರಾದ ಜಮುನಾ, ರಾಣಿ, ರಮೇಶ್, ಕವಿತಾ ಶಿವಮೂರ್ತಿ, ಧನಂಜಯ್ ಹಾಗೂ ಸಿಬ್ಬಂದಿ ಇದ್ದರು.