ಎಸ್ಸೆಸ್ಸೆಲ್ಸಿ ಫಲಿತಾಂಶ ಕ್ಷೀಣಿಸಿದರೆ ಶಿಕ್ಷಕರೇ ಹೊಣೆ

Teachers are responsible if the result of SSC declines
Published on

ಶಿಕ್ಷಣ- ಸಾಕ್ಷರತಾ ಇಲಾಖೆ ಉಪನಿರ್ದೇಶಕ ಜಿ.ಕೊಟ್ರೇಶ್ ಎಚ್ಚರಿಕೆ ಹರಿಹರದಲ್ಲಿ ವಿಜ್ಞಾನ ಶಿಕ್ಷಕರ ಕಾರ್ಯಾಗಾರ

ಹರಿಹರ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಫಲಿತಾಂಶ ಕ್ಷೀಣಿಸಿದರೆ ಆಯಾ ವಿಷಯವಾರು ಶಿಕ್ಷಕರನ್ನೇ ಹೊಣೆ ಮಾಡಲಾಗುವುದು ಎಂದು ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕ ಜಿ. ಕೊಟ್ರೇಶ್ ಎಚ್ಚರಿಸಿದರು.

ನಗರದ ಗುತ್ತೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಬುಧವಾರ ಆಯೋಜಿಸಿದ್ದ ತಾಲೂಕು ಮಟ್ಟದ ವಿಜ್ಞಾನ ಶಿಕ್ಷಕರ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಪರೀಕ್ಷೆ ನಡೆಸುವ ಪ್ರಕ್ರಿಯೆಯಲ್ಲಿ ಬಿಗಿ ಕ್ರಮ ಸರ್ಕಾರ ಜಾರಿ ಮಾಡಿದೆ ಎಂದರು.

ಶ್ರಮವಹಿಸುವ ಶಿಕ್ಷಕರು ಇರುವ ಶಾಲೆಗಳು ಮಾತ್ರ ಉತ್ತಮ ಫಲಿತಾಂಶ ಪಡೆಯಲು ಸಾಧ್ಯ. ಸರ್ಕಾರ- ಇಲಾಖೆ ಶಿಕ್ಷಕರ ಮೇಲಿಟ್ಟಿರುವ ಭರವಸೆ ಈಡೇರಿಸಲೇ ಬೇಕಾಗಿದೆ. ತಪ್ಪಿದಲ್ಲಿ ಆಯಾ ವಿಷಯವಾರು ಶಿಕ್ಷಕರು ವಿರುದ್ಧ ಇಲಾಖೆ ಕ್ರಮ ಕೈಗೊಳ್ಳುವುದು ಅನಿವಾರ್ಯ ಎಂದರು.

ಕಳೆದ ಶೈಕ್ಷಣಿಕ ಸಾಲಿನಲ್ಲಿ ಶೇ. 40ಕ್ಕಿಂತ ಕಡಿಮೆ ಫಲಿತಾಂಶ ಪಡೆದ ಶಾಲೆಗಳನ್ನು ಶಿಕ್ಷಣ ಇಲಾಖೆ ಅಧಿಕಾರಿಯೊಬ್ಬರಿಗೆ ಒಂದು ಶಾಲೆ ದತ್ತು ನೀಡಲಾಗುತ್ತದೆ. ಆ ಅಧಿಕಾರಿಯು ಶಾಲೆಯ ಶೈಕ್ಷಣಿಕ ಆಗುಹೋಗು ಗಮನಿಸಿ ಮಾರ್ಗದರ್ಶನ ನೀಡುವರು ಎಂದರು.

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆಯಬೇಕೆಂದರೆ ಶಾಲೆಯಲ್ಲಿ 8ನೇ ತರಗತಿಯಿಂದಲೇ ವಿದ್ಯಾರ್ಥಿಗಳನ್ನು ಸಿದ್ಧಗೊಳಿಸುತ್ತ ಬರಬೇಕು. ಸರ್ಕಾರಿ, ಅನುದಾನಿತ, ಅನುದಾನ ರಹಿತ ಯಾವುದೇ ಶಾಲೆ ಇದ್ದರೂ ಶಾಲೆಗೆ ಬಾರದಿರುವ ವಿದ್ಯಾರ್ಥಿಗಳ ಮನೆಗೆ ಭೇಟಿ ನೀಡಿ ಕರೆತರಬೇಕು ಎಂದು ಹೇಳಿದರು.

ನಿಯಮಿತವಾಗಿ ಪಾಲಕರ ಸಭೆ ನಡೆಸಬೇಕು. ಶಿಕ್ಷಕರೂ ಸೂಕ್ತ ಪೂರ್ವತಯಾರಿ ಮಾಡಿಕೊಂಡು ಶಾಲೆಗೆ ಬಂದರೆ ಪ್ರಭಾವಿಯಾಗಿ ಪಾಠ ಮಾಡಲು ಸಾಧ್ಯ. ವಿಶೇಷ ತರಗತಿ, ಘಟಕ, ಮಾಸಿಕ ಪರೀಕ್ಷೆ, ರಸಪ್ರಶ್ನೆ ಕಾರ್ಯಕ್ರಮ ಮಾಡುವ ಮೂಲಕ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಗುಣಾತ್ಮಕವಾಗಿ ಸಿದ್ಧಗೊಳಿಸಬೇಕು ಎಂದರು.

ಬಿಇಒ ಎಂ. ಹನುಮಂತಪ್ಪ ಮಾತನಾಡಿ, ಪ್ರತಿ ವಿದ್ಯಾರ್ಥಿಯನ್ನು ವೈಯಕ್ತಿವಾಗಿ ಗಮನಹರಿಸಿ ಪಾಠಬೋಧನೆ ಮಾಡುವುದರಿಂದ ಶಿಕ್ಷಕರು ಯಶಸ್ಸು ಕಾಣಲು ಸಾಧ್ಯ ಎಂದರು.

ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ನಾಗರಾಜಪ್ಪ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ವಿಜ್ಞಾನ ಶಿಕ್ಷಕರ ಸಂಘದ ಅಧ್ಯಕ್ಷ ಮಂಜುನಾಥ ಜೋಗಪ್ಪನವರ್, ಸಂಚಾಲಕ ಬಸವನಗೌಡ್ರು, ರಾಜ್ಯ ಸಂಪನ್ಮೂಲ ವ್ಯಕ್ತಿ ಶ್ರೀಧರ್ ಮಯ್ಯ ಮಾತನಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net