

ಬಾಳೆಹೊನ್ನೂರು: ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಹೊಣೆ ಶಿಕ್ಷಕರ ಮೇಲಿದೆ ಎಂದು ಲಯನ್ಸ್ ಕ್ಲಬ್ ಅಧ್ಯಕ್ಷ ಎಚ್.ಜೆ.ವಿಕ್ರಮ್ ಹೇಳಿದರು.
ಪಟ್ಟಣದ ಲಯನ್ಸ್ ಕ್ಲಬ್‌ಆಯೋಜಿಸಿದ್ದ ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮದಲ್ಲಿ ಮಾತನಾಡಿ, ವಿದ್ಯಾರ್ಥಿಗಳ ಏಳ್ಗೆಯ ಮಹತ್ತರ ಜವಾಬ್ದಾರಿ ಶಿಕ್ಷಕರ ಮೇಲಿದೆ. ಇಂದಿನ ಆಧುನಿಕ ಶಿಕ್ಷಣ ಪದ್ಧತಿಗೆ ಅನುಸಾರವಾಗಿ ವಿದ್ಯಾರ್ಥಿಗಳಿಗೆ ವಿನೂತನ ಮಾದರಿ ಶಿಕ್ಷಣ ನೀಡುವಲ್ಲಿ ಶಿಕ್ಷಕರು ಗಮನಹರಿಸಬೇಕು. ಡಾ.ರಾಧಾಕೃಷ್ಣರವರಿಗೆ ಕರ್ತವ್ಯದ ಮೇಲಿದ್ದ ಬದ್ಧತೆ ಹಾಗೂ ಶ್ರದ್ಧೆಯಿಂದ ಅವರು ಶಿಕ್ಷಕ ವೃತ್ತಿಯಿಂದ ರಾಷ್ಟ್ರಪತಿ ಸ್ಥಾನದವರೆಗೆ ತಲುಪಿದರು ಎಂದರು.
ಲಯನ್ಸ್ ಕ್ಲಬ್ ಕಾರ್ಯದರ್ಶಿ ಸುಧಾಕರ್ ಮಾತನಾಡಿ, ವಿದ್ಯೆ ಕಲಿಸಿದ ಗುರುಗಳಿಗೆ ಗೌರವ ಸಲ್ಲಿಸಬೇಕಿರುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ವಿದ್ಯಾರ್ಥಿ ಜೀವನದಲ್ಲಿದ್ದಾಗ ಶಿಕ್ಷಕರು ನೀಡುವ ಶಿಕ್ಷಣ ನಮ್ಮ ಭವಿಷ್ಯವನ್ನು ರೂಪಿಸಲಿದೆ. ವಿದ್ಯಾರ್ಥಿ ಜೀವನದಲ್ಲಿ ನಾವು ತಪ್ಪು ಮಾಡಿದಾಗ ನಮ್ಮನ್ನು ಶಿಕ್ಷಿಸಿ ಉತ್ತಮ ಮಾರ್ಗದಲ್ಲಿ ನಡೆಯುವಂತೆ ಶಿಕ್ಷಕರು ದಾರಿ ತೋರಿಸಿರುತ್ತಾರೆ. ಅದರಿಂದಲೇ ನಾವುಗಳು ಇಂದು ಉತ್ತಮ ಸ್ಥಾನಮಾನ, ಉನ್ನತ ಜೀವನ ನಡೆಸಲು ಸಾಧ್ಯವಾಗಿದೆ. ಬದುಕಿಗೆ ಗುರಿ ತೋರಿಸಿಕೊಟ್ಟ ಶಿಕ್ಷಕರನ್ನು ಎಂದಿಗೂ ಮರೆಯಬಾರದು ಎಂದರು.
ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಎಮಿಲ್ಡಾ, ಶಾಹಿನಾ, ಶಕುಂತಳ, ವನಿತ, ಮುಖ್ಯಶಿಕ್ಷಕ ಸುರೇಂದ್ರ ಅವರನ್ನು ಸನ್ಮಾನಿಸಲಾಯಿತು. ಲಯನ್ಸ್ ಕ್ಲಬ್ ನಿಕಟಪೂರ್ವ ಅಧ್ಯಕ್ಷ ಎಂ.ವಿ.ಶ್ರೀನಿವಾಸ್, ಖಜಾಂಚಿ ಕೆ.ಸಿ.ರವೀಂದ್ರ, ವಲಯಾಧ್ಯಕ್ಷ ಎಂ.ಡಿ.ಶಿವರಾಮ್, ಪೂರ್ವಾಧ್ಯಕ್ಷ ಕೆ.ಜೈಪ್ರಕಾಶ್, ಸದಸ್ಯರಾದ ಟಿ.ಎಂ.ಗುರುಮೂರ್ತಿ, ಉಪೇಂದ್ರ, ವಿಜಯೇಂದ್ರ ಮತ್ತಿತರರು ಹಾಜರಿದ್ದರು.