

ವಿರಾಜಪೇಟೆ: ಮಕ್ಕಳು ಶಿಕ್ಷಣ ಪಡೆಯಲು ಜ್ಞಾನ ದೇಗುಲಕ್ಕೆ ಆಗಮಿಸುತ್ತಾರೆ. ಶಿಕ್ಷಕರು ಎಲ್ಲ ಮಕ್ಕಳನ್ನು ಒಂದೇ ರೀತಿಯಲ್ಲಿ ಕಂಡು ಉತ್ತಮ ಭೋದನೆ ನೀಡುವ ಮೂಲಕ ಸತ್ಪ್ರಜೆಗಳನ್ನಾಗಿ ರೂಪಿಸಲು ಸಾಧ್ಯ ಎಂದು ದೇವಣಗೇರಿ ಬಿ.ಸಿ.ಶಾಲೆಯ ನಿವೃತ್ತ ದೈಹಿಕ ಶಿಕ್ಷಕ ಬೀರಂಡ ಎಸ್. ಪೂಣಚ್ಚ ಅಭಿಪ್ರಾಯಪಟ್ಟರು.
ಲಯನ್ಸ್ ಕ್ಲಬ್ ವಿರಾಜಪೇಟೆ ವತಿಯಿಂದ ಪಟ್ಟಣದ ರೋಟರಿ ಶಾಲೆಯ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಗುರುಕುಲ ಪದ್ಧತಿಯ ಶಿಕ್ಷಣ ಮರೆಯಾದ ನಂತರ ಸರ್ಕಾರಿ ಶಾಲೆಗಳು ಆರಂಭವಾದವು. ಸರ್ಕಾರಿ ಶಾಲೆಗಳಿಗೆ ಪೈಪೋಟಿ ನೀಡಲು ಖಾಸಗಿ ಶಾಲೆಗಳು ಅರಂಭವಾಗಿವೆ. ಪೈಪೋಟಿಗಳ ನಡುವೆ ಶಿಕ್ಷಣವು ವ್ಯಾಪಾರದ ವಸ್ತುವಾಗಿ ಮಾರ್ಪಟ್ಟಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಶಿಕ್ಷಣ ಪಡೆದ ವ್ಯಕ್ತಿಯಿಂದ ಸುಶಿಕ್ಷಿತ ಸಮಾಜ ರೂಪುಗೊಳ್ಳಲು ಸಾಧ್ಯ. ಶಿಕ್ಷಣ ಕ್ಷೇತ್ರದಲ್ಲಿ ಮೌಲ್ಯಗಳ ಕೊರತೆ ಕಾಣಿಸಿಕೊಂಡಿದೆ. ಮೌಲ್ಯಗಳು ಮರೆಯಾದ್ದರಿಂದ ವಿದ್ಯಾರ್ಥಿಗಳಲ್ಲಿ ಮಾನವೀಯ ಸಂಬಂಧಗಳು ಮರೆಯಾಗಿವೆ ಎಂದರು.
ರೋಟರಿ ಸಂಸ್ಥೆಯು ಸಾಮಾಜಮುಖಿ ಚಟವುಟಿಕೆಗಳ ಮೂಲಕ ಜನಮಾನಸದಲ್ಲಿ ಗುರುತಿಸಿಕೊಂಡಿದೆ. ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ವೈದ್ಯಕೀಯ, ಕ್ರೀಡೆ ಹಾಗೂ ಇತರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮಕ್ಕಳನ್ನು ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯ ಎಂದರು.
ರೋಟರಿ ಸಂಸ್ಥೆಯ ಪ್ರಾಂತಿಯ ಅಧಿಕಾರಿ ಕನ್ನಂಡ ಸುಧಾ ಬೊಳ್ಳಪ್ಪ ಮಾತನಾಡಿ, ರೋಟರಿ ಕ್ಲಬ್‌ಗಳು ವಿನೋತನ ಕಾರ್ಯಕ್ರಮಗಳನ್ನು ರೂಪಿಸಿ ಜಾರಿಗೊಳಿಸಬೇಕು. ಜತೆಗೆ ಹೊಸ ಸದಸ್ಯರನ್ನು ಸೇರ್ಪಡೆಗೊಳಿಸಬೇಕು ಎಂದರು.
ವಿರಾಜಪೇಟೆ ಲಯನ್ಸ್ ಕ್ಲಬ್ ಅಧ್ಯಕ್ಷ ಬಿ.ಪಿ. ಗಣಪತಿ ಕಾರ್ಯಕ್ರಮದ ಅದ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿಗಳಾದ ಪಿ.ಟಿ, ನರೇಂದ್ರ ಕ್ಲಬ್‌ನ ಕಾರ್ಯಕ್ರಮಗಳ ಬಗ್ಗೆ ವರದಿ ನೀಡಿದರು. ಕವಿತಾ ಕಾವೇರಪ್ಪ, ಪ್ರಸನ್ನಾ ಮತ್ತಿತರರಿದ್ದರು. ವಿರಾಜಪೇಟೆಯ ಲಯನ್ಸ್ ಕ್ಲಬ್ ಹಾಗೂ ವಿವಿಧ ಕ್ಲಬ್‌ಗಳ ಪದಾಧಿಕಾರಿಗಳು, ಸದಸ್ಯರು ಕಾರ್ಯಕ್ರಮದಲ್ಲಿ ಹಾಜರಿದ್ದರು.