ಶಿಕ್ಷಕರು ಸಮಾಜ ಕಟ್ಟುವ ಶಿಲ್ಪಿಗಳು: ಬಿ.ವೈ.ವಿಜಯೇಂದ್ರ

5 ಎಸ್ಕೆಪಿ 1
ಶಿಕಾರಿಪುರದಲ್ಲಿ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಶಾಸಕ ಬಿ.ವೈ.ವಿಜಯೇಂದ್ರ ಉದ್ಘಾಟಿಸಿದರು. ಪರಮೇಶ್, ಶಶಿಧರ್, ಪುಟ್ಟರಾಜು, ಮಧುಕೇಶ್ವರ ಇತರರಿದ್ದರು.
Published on

ಶಿಕಾರಿಪುರ: ಪವಿತ್ರವಾದ ಮತ್ತು ಬೆಲೆಕಟ್ಟಲಾರದ ವೃತ್ತಿ ಎಂದರೆ ಶಿಕ್ಷಕ ವೃತ್ತಿ. ಅದು ಸಮಾಜ ಕಟ್ಟುವಂತಹ ಅತ್ಯಂತ ಶ್ರೇಷ್ಠ ಕೆಲಸ ಎಂದು ಶಾಸಕ ಬಿ.ವೈ.ವಿಜಯೇಂದ್ರ ಹೇಳಿದರು.

ಪಟ್ಟಣದಲ್ಲಿ ಮಂಗಳವಾರ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆಯಲ್ಲಿ ಮಾತನಾಡಿ, ದೇಶದ ಪ್ರಗತಿಗೆ ಅಡಿಪಾಯವೇ ಶಿಕ್ಷಣ. ಯಾವ ಮಕ್ಕಳೂ ಶಿಕ್ಷಣದಿಂದ ವಂಚಿತರಾಗಬಾರದು ಎಂದರು.
ಶಿಕ್ಷಕ ಸಮೂಹ, ಸಾಕ್ಷರ ಸಮಾಜ ನಿರ್ಮಿಸುವ ಸಮೂಹ. ಅವರ ಶ್ರದ್ಧೆ, ಪರಿಶ್ರಮ ಮತ್ತು ಸಾಮಾಜಿಕ ಕಳಕಳಿ ಮೆಚ್ಚುವಂಥದ್ದು. ಇಂದಿನ ಶಿಕ್ಷಣ ಕೇವಲ ಅಂಕ ಗಳಿಕೆಯ ಶಿಕ್ಷಣವಾಗುತ್ತಿದೆ. ಪಠ್ಯದ ಜತೆ ಜತೆಗೆ ಪಠ್ಯೇತರ ಚಟುವಟಿಕೆಗಳ ಕಡೆಗೂ ಗಮನಹರಿಸಬೇಕು. ಈ ನೆಲದ ಸಾಂಸ್ಕೃತಿಕ ಪರಂಪರೆಯ ಅರಿವು, ನೆಲ, ಜಲ, ಭಾಷೆಯ ಬಗ್ಗೆ ಮಕ್ಕಳಲ್ಲಿ ಅಭಿಮಾನ ಮೂಡಿಸಬೇಕು. ಇಂದಿನ ಮಕ್ಕಳೇ ನಾಳೆಯ ಭವಿಷ್ಯ. ಸಂಸ್ಕಾರಯುತ ಶಿಕ್ಷಣ ನಮ್ಮದಾಗಬೇಕು ಎಂದು ಹೇಳಿದರು.
ಶಿಕ್ಷಕರೊಬ್ಬರು ದೇಶದ ಪ್ರಥಮ ಪ್ರಜೆಯಾಗಿ ಸೇವೆ ಸಲ್ಲಿಸಿ ಜಗತ್ತಿಗೇ ಶಿಕ್ಷಕ ವೃತ್ತಿಯ ಮಹತ್ವ ಸಾರಿದರು. ಶಿಕ್ಷಕ ವೃತ್ತಿ ಎಂದರೆ ಸ್ವಾರ್ಥ ರಹಿತವಾದ ಕಾಯಕ. ತಮ್ಮಲ್ಲಿರುವ ಜ್ಞಾನವನ್ನು ಮಕ್ಕಳಿಗೆ ಹಂಚುವ ಕಾರ್ಯ. ಸಹಭೋಜನ, ಸಹಬಾಳ್ವೆ, ಸದ್ವಿಚಾರ, ಸಹೃದಯತೆ ಜತೆಗೆ ನಾವೆಲ್ಲರೂ ಒಂದು, ನಾವೆಲ್ಲರೂ ಬಂಧುಗಳು ಎನ್ನುವ ಮನಸ್ಥಿತಿ ನಿರ್ಮಾಣ ಮಾಡುತ್ತಾರೆ ಎಂದು ಹೇಳಿದರು.
ಇಒ ಪರಮೇಶ್, ಬಿಇಒ ಶಶಿಧರ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಪುಟ್ಟರಾಜು, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಮಧುಕೇಶ್ವರ, ಇಸಿಒ ಶಂಕರಪ್ಪ, ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ಬಿ.ಪಾಪಯ್ಯ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಎಂ.ಜಿ.ಪ್ರಕಾಶ್, ಜಿಲ್ಲಾ ಗೌರವಾಧ್ಯಕ್ಷ ಬಿ.ಆರ್.ಮಂಜಪ್ಪ, ತಾಲೂಕು ಅಧ್ಯಕ್ಷ ಚಂದ್ರಾನಾಯ್ಕ, ನಾಗರಾಜ್ ನಾಯ್ಕ, ಬಸವನಗೌಡ ಹಿರೇಕೊಣತಿ, ರಾಜಶೇಖರ್ ಇತರರಿದ್ದರು.

ಗುರುಭವನ ಕಾಯಕಲ್ಪಕ್ಕೆ ಬದ್ಧ
‘ವಿಜಯವಾಣಿ’ ಪತ್ರಿಕೆಯಲ್ಲಿ ಶಿಕಾರಿಪುರದ ಗುರುಭವನದ ದುರಸ್ತಿ ಬಗ್ಗೆ ವರದಿ ನೋಡಿದೆ. ಇದು ಶಿಕ್ಷಕರಿಗಾಗಿಯೇ ಇರುವಂತಹ ಮತ್ತು ಶಿಕ್ಷಕರು ತಮ್ಮ ಒಂದು ತಿಂಗಳ ಗೌರವಧನವನ್ನು ನೀಡಿ ಕಟ್ಟಿಸಿದಂತಹ ಗುರು ಮನೆ. ಇದರ ದುರಸ್ತಿ ಅಥವಾ ನಿರ್ಮಾಣಕ್ಕೆ ಸಂಬಂಧಿಸಿದವರ ಜತೆಗೆ ಚರ್ಚಿಸಿ ಕಾಯಕಲ್ಪ ನೀಡೋಣ. ಮತ್ತೆ ಗುರುಭವನ ಸುಸಜ್ಜಿತಗೊಂಡು ಶಿಕ್ಷಕರಿಗೆ ಅನುಕೂಲವಾಗಬೇಕು. ಶಿಕ್ಷಕರು ಸ್ಪರ್ಧಾ ಜಗತ್ತಿನಲ್ಲಿ ಉತ್ತಮ ಫಲಿತಾಂಶದ ಕಡೆಗೂ ಗಮನಹರಿಸಬೇಕು. ಈಗಾಗಲೇ ಬಹುತೇಕ ಹಾಳಾಗಿದ್ದ ಶಾಲಾ ಕಟ್ಟಡಗಳ ದುರಸ್ತಿ ಕಾರ್ಯ ಮಾಡಲಾಗಿದೆ. ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದನೆಗೆ ನಾನು ಸಿದ್ಧನಾಗಿದ್ದೇನೆ ಎಂದ ಬಿ.ವೈ.ವಿಜಯೇಂದ್ರ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net