

ಶ್ರೀನಿವಾಸಪುರ: ಶಿಕ್ಷಕ ಹಾಗೂ ಮಗುವಿನ ಪಾಲಕರು ಒಂದೇ ನಾಣ್ಯದ ಎರಡು ಮುಖಗಳು ಇದ್ದಂತೆ. ಶಿಕ್ಷಕ ಮತ್ತು ಮಗುವಿನ ಪಾಲಕರು ಮಗುವಿನ ಪ್ರಗತಿಗಾಗಿ ಅನೇಕ ಕನಸುಗಳನ್ನು ಕಂಡಿರುತ್ತಾರೆ. ಅದನ್ನ ಸಾಕಾರಗೊಳಿಸಲು ಯಾವುದೇ ಸ್ವಾರ್ಥವಿಲ್ಲದೆ ಮಗುವಿನ ಗುರಿ ಮುಟ್ಟಿಸಲು ಹಗಲಿರಲು ಶ್ರಮಿಸುತ್ತಾರೆ. ಮಗುವಿಗೆ ತಾಯಿಯ ಮಡಿಲೇ ಮೊದಲನೇ ಗುರು, ಎರಡನೇಯದು ಶಾಲೆ ಎಂದು ಕೋಲಾರ ಮತ್ತು ಚಿಕ್ಕಬಳ್ಳಾಪುರ ಶಾಖಾ ಮಠದ ಮಂಗಳಾನಾಥಸ್ವಾಮಿ ಹೇಳಿದರು.
ಪಟ್ಟಣ ಹೊರವಲಯದ ಬೈರವೇಶ್ವರ ವಿದ್ಯಾನಿಕೇತ ಶಾಲೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಜ್ಞಾನಾಂಕುರ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಕ್ಕಳಿಗೆ ಪುಸ್ತಕದ ಅಕ್ಷರ ಕಲಿಸಿದರೆ ಸಾಲದು, ಜತೆಗೆ ವಿದ್ಯಾರ್ಥಿಗಳಲ್ಲಿ ಸಂಸತಿ, ಸಂಸ್ಕಾರ ಬೆಳಸಿದಾಗ ಮಾತ್ರ ಉತ್ತಮ ವ್ಯಕ್ತಿತ್ವ ರೂಪುಗೊಂಡು ಸಮಾಜಮುಖಿಯಾಗಿ ಬದುಕಲು ಸಾಧ್ಯ. ಪಾಲಕರು ತಮ್ಮ ಮಕ್ಕಳನ್ನು ಶಾಲೆಗಳಿಗೆ ಕಳುಹಿಸುವುದರ ಮೂಲಕ ಸಾಕ್ಷರನ್ನಾಗಿ ಮಾಡುವುದರ ಮೂಲಕ ದೇಶದ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.
ಬಿಜಿಎಸ್ ಶಾಲಾ&ಕಾಲೇಜುಗಳ ಆಡಳಿತಾಧಿಕಾರಿ ಎನ್.ಶಿವರಾಘವರೆಡ್ಡಿ ಮಾತನಾಡಿ, ಮಗುವಿನ ಪ್ರಗತಿಗೆ ಮೊದಲನೇ ಆಧಾರ ಸ್ತಂಬ ಮಗುವಿನ ತಂದೆತಾಯಿ. ಮಗುವಿನಲ್ಲಿನ ಜ್ಞಾನವನ್ನು ಗುರುತಿಸುವುದು ಮಗುವಿನ ತಾಯಿ. ಮಗುವಿನ ಜ್ಞಾನವನ್ನು ಗಮನಿಸುವುದು ತಂದೆತಾಯಿ ನಂತರ ಶಾಲೆಯಲ್ಲಿನ ಶಿಕ್ಷಕ. ಮಗುವಿನಲ್ಲಿನ ಸಾಮಾರ್ಥ್ಯಕ್ಕೆ ಶಿಕ್ಷಕರೊಂದಿಗೆ ಮನೆಯಲ್ಲಿ ತಂದೆತಾಯಿ ಕೈಜೋಡಿಸಿದಾಗ ಆ ಮಗುವಿನಲ್ಲಿನ ಪ್ರಗತಿಗೆ ಕಾರಣಬಹುದಾಗಿದೆ ಎಂದರು.
ಡಾ.ವೈ.ವಿ.ವೆಂಕಟಾಚಲ ಮಾತನಾಡಿ, ಪಾಲಕರು ತಮ್ಮ ಮಕ್ಕಳ ಶೈಕ್ಷಣಿಕ ಬೆಳವಣಿಗೆಯೊಂದಿಗೆ ಆರೋಗ್ಯದ ಕಡೆಯೂ ಹೆಚ್ಚು ಗಮನಹರಿಸಬೇಕು. ಇಂದು ಮಾರುಕಟ್ಟೆಯಲ್ಲಿ ವಿಷ ಮಿಶ್ರಿತ ಕಲಬೆರಕೆ ಆಹಾರವು ಹೆಚ್ಚು ವ್ಯಾಪಾರ ವಹಿವಾಟು ನಡೆಯುತ್ತಿದೆ ಆದ್ದರಿಂದ ಪಾಲಕರು ತಮ್ಮ ಮಕ್ಕಳ ಶಿಕ್ಷಣದ ಜತೆ ಆರೋಗ್ಯದ ಕಡೆಯೂ ಎಚ್ಚರಿಕೆವಹಿಸಬೇಕಿದೆ ಎಂದರು.