ನಾಡ್ಪಾಲು ಸೀತಾನದಿ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರು ಗೈರು, ವಿದ್ಯಾರ್ಥಿ ಕಂಗಾಲು

shaale new
Published on

ಹೆಬ್ರಿ: ಸಮೀಪದ ನಾಡ್ಪಾಲು ಸೀತಾನದಿ ಎಂಬಲ್ಲಿನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರು ಬುಧವಾರ ಗೈರುಹಾಜರಾಗಿದ್ದರಿಂದ ವಿದ್ಯಾರ್ಥಿಗಳು ಕಂಗಾಲಾಗಿದ್ದು, ಶೈಕ್ಷಣಿಕ ವ್ಯವಸ್ಥೆಗೇ ಮುಜುಗರ ತರುವ ಸನ್ನಿವೇಶ ಉಂಟಾಯಿತು.
ಶಾಲೆಯಲ್ಲಿ 20 ವಿದ್ಯಾರ್ಥಿಗಳಿದ್ದು ಮೂವರು ಶಿಕ್ಷಕರಿದ್ದಾರೆ. ಈ ಪೈಕಿ ಒಬ್ಬರು ಶಿಶುಪಾಲನಾ ರಜೆಯಲ್ಲಿದ್ದು, ಇನ್ನೊಬ್ಬರನ್ನು ನೆಲ್ಲಿಕಟ್ಟೆ ಶಾಲೆಗೆ ನಿಯೋಜಿಸಲಾಗಿತ್ತು. ಮತ್ತೊಬ್ಬರು ಅನಾರೋಗ್ಯದ ಕಾರಣ ಹೇಳಿ ಬುಧವಾರ ಶಾಲೆಗೆ ರಜೆ ಹಾಕಿದ್ದರು. ರಜೆ ಹಾಕಿದವರ ಬಳಿ ಈ ಬಗ್ಗೆ ಕೇಳಿದಾಗ ಕ್ಷೇತ್ರ ಶಿಕ್ಷಣಾಧಿಕಾರಿಗೆ ಮಾಹಿತಿ ನೀಡಿದ್ದಾಗಿ ತಿಳಿಸಿದ್ದಾರೆ. ಆದರೆ ಕ್ಷೇತ್ರ ಶಿಕ್ಷಣಾಧಿಕಾರಿ ತಮ್ಮ ಗಮನಕ್ಕೆ ಬಂದಿಲ್ಲವೆಂದು ನುಣುಚಿಕೊಳ್ಳುತ್ತಿರುವುದಾಗಿ ಮಕ್ಕಳ ಪಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಿಕ್ಷಕರ ಗೈರುಹಾಜರಿ ವಿಷಯ ತಿಳಿದು ಬಿಆರ್‌ಸಿ ಹಾಗೂ ಸಿಆರ್‌ಸಿ (ಬ್ಲಾಕ್ ಮತ್ತು ಕ್ಲಸ್ಟರ್ ಸಂಪನ್ಮೂಲ ಸಂಯೋಜಕರು) ಅಧಿಕಾರಿಗಳು ಶಾಲೆಗೆ ಭೇಟಿ ನೀಡಿ ಹೆತ್ತವರಿಗೆ ಧೈರ್ಯ ತುಂಬಿದರು. ಬಳಿಕ ದಿನದ ಮಟ್ಟಿಗೆ ಸಿಆರ್‌ಸಿ ಪ್ರತಿಮಾ ವಿದ್ಯಾರ್ಥಿಗಳ ಜವಾಬ್ದಾರಿ ಹೊತ್ತು ಶಾಲೆಯನ್ನು ಮುನ್ನಡೆಸಿದರು.

ಮಕ್ಕಳ ಪಾಲಕರ ಆಕ್ರೋಶ: ಸರ್ಕಾರಿ ಶಾಲೆಯಲ್ಲಿ ಉತ್ತಮ ವ್ಯವಸ್ಥೆಗಳು ಇರುತ್ತವೆ ಎಂದು ಹೆತ್ತವರು ಮಕ್ಕಳನ್ನು ಇಲ್ಲಿನ ಶಾಲೆಗೆ ಸೇರಿಸಿದರೆ, ಬಹುತೇಕ ಶಾಲೆಯಲ್ಲಿ ಶಿಕ್ಷಕರು ನುಣುಚಿಕೊಳ್ಳುವುದರ ಮೂಲಕ ಶೈಕ್ಷಣಿಕ ವ್ಯವಸ್ಥೆಗೆ ಧಕ್ಕೆ ತಂದಿದ್ದಾರೆ. ಮುಂದೆ ಈ ರೀತಿಯ ಸನ್ನಿವೇಶಗಳು ಎಂದೂ ನಡೆಯಬಾರದು ಎಂದು ಮಕ್ಕಳ ಪಾಲಕರು ಆಕ್ರೋಶ ವ್ಯಕ್ತಪಡಿಸಿದರು. ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ಆತಂಕ ವ್ಯಕ್ತಪಡಿಸಿದ ಕೆಲವರು ಟಿಸಿ ಹಿಂಪಡೆಯಲು ಪಟ್ಟುಹಿಡಿದರು. ಬಿಆರ್‌ಸಿ ಹಾಗೂ ಸಿಆರ್‌ಸಿ ಸಮಾಧಾನಪಡಿಸಿದರೂ ಒಪ್ಪಲಿಲ್ಲ.

ಗಮನ ಹರಿಸಲಿ ಶೈಕ್ಷಣಿಕ ಇಲಾಖೆ: ವಿವಿಧ ಶಾಲೆಗಳಲ್ಲಿ ಅನೇಕ ಕಾರಣ ನೀಡಿ ಶಿಕ್ಷಕರನ್ನು ವರ್ಗಾವಣೆ/ ನಿಯೋಜನೆ ಮಾಡಿರುವುದು ಖಂಡನೀಯ ಎಂದು ಮಕ್ಕಳ ಪಾಲಕರು ಹೇಳಿದರು. ಬಹುತೇಕ ಸರ್ಕಾರಿ ಶಾಲೆಗಳಲ್ಲಿ ಒಬ್ಬರು, ಇಬ್ಬರು ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಅನಾರೋಗ್ಯ ಅಥವಾ ಅಗತ್ಯ ತುರ್ತು ಸಂದರ್ಭ ಶಿಕ್ಷಕರಿಗೆ ರಜೆ ಮಂಜೂರಾಗುವುದಿಲ್ಲ. ಇವೆಲ್ಲವನ್ನು ಗಮನದಲ್ಲಿಟ್ಟುಕೊಂಡು ಇಲಾಖೆ ಕಾರ್ಯನಿರ್ವಹಿಸಬೇಕು ಎನ್ನುತ್ತಾರೆ ಅವರು.

ರಜೆ ಮಂಜೂರು ಆಗದೆ, ಶಿಕ್ಷಕಿ ಶಾಲೆಗೆ ರಜೆ ಹಾಕಿರುವುದು ಗಮನಕ್ಕೆ ಬಂದಿದೆ. ಒಬ್ಬರು ಶಿಶುಪಾಲನಾ ರಜೆಯಲ್ಲಿದ್ದು, ರಜೆ ಹಾಕಿದ ಶಿಕ್ಷಕಿಯಲ್ಲಿ ವಿಚಾರಿಸಿದಾಗ ಅನಾರೋಗ್ಯದ ಸಮಸ್ಯೆ ಮುಂದಿಟ್ಟಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
ವೆಂಕಟೇಶ್ ನಾಯಕ್, ಕ್ಷೇತ್ರ ಶಿಕ್ಷಣಾಧಿಕಾರಿ, ಕಾರ್ಕಳ

ಮಕ್ಕಳ ವಿದ್ಯಾರ್ಥಿ ಜೀವನದಲ್ಲಿ ಚೆಲ್ಲಾಟ ಆಡುವುದನ್ನು ಸಹಿಸುವುದಿಲ್ಲ. ಇಂದಿನ ಘಟನೆ ಸರ್ಕಾರಿ ವ್ಯವಸ್ಥೆಯ ಬಗ್ಗೆ ಮುಜುಗರ ತಂದಿಟ್ಟಿದೆ. ಈ ಬಗ್ಗೆ ಸಂಬಂಧಿತ ಇಲಾಖೆಯವರು ಗಮನ ಹರಿಸಿ ಸರ್ಕಾರಿ ವ್ಯವಸ್ಥೆಯ ಬಗ್ಗೆ ಜನರಿಗೆ ನಕಾರಾತ್ಮಕ ನಿಲುವು ಬರದ ಹಾಗೆ ನಡೆದುಕೊಳ್ಳಬೇಕು.
ದಿನೇಶ್ ಹೆಗ್ಡೆ, ನಾಡ್ಪಾಲು ಗ್ರಾಪಂ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net