

ಮುಂಡಗೋಡ: ಮಕ್ಕಳಲ್ಲಿನ ಪ್ರತಿಭೆ ಹೊರ ಹಾಕಲು ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮ ಉತ್ತಮ ವೇದಿಕೆ ಎಂದು ಮಾಜಿ ಶಾಸಕ ವಿ.ಎಸ್. ಪಾಟೀಲ ಹೇಳಿದರು.
ಪಟ್ಟಣದ ವಿವೇಕಾನಂದ ಬಯಲು ರಂಗ ಮಂಟಪದಲ್ಲಿ ಗುರುವಾರ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿದ್ಯಾರ್ಥಿಗಳ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ಗುರು ಎಂಬುವ ಶಬ್ದಕ್ಕೆ ದೊಡ್ಡ ಗೌರವವಿದೆ. ಅದನ್ನು ಉಳಿಸಿಕೊಂಡು ಹೋಗಬೇಕು. ಶಿಕ್ಷಕರು ಮೊದಲು ಶಿಸ್ತು ಪಾಲನೆ ಮಾಡಿದರೆ ಮಾತ್ರ ಮಕ್ಕಳು ಶಿಸ್ತಿನ ಪಾಠ ಕಲಿಯುತ್ತಾರೆ. ಮಕ್ಕಳ ಭವಿಷ್ಯ ಶಿಕ್ಷಕರ ಕೈಯಲ್ಲಿರುತ್ತದೆ. ಅವರನ್ನು ಸಮಾಜದಲ್ಲಿ ಉತ್ತಮ ವ್ಯಕ್ತಿಯನ್ನಾಗಿ ರೂಪಿಸಬೇಕು. ಪ್ರತಿಭಾ ಕಾರಂಜಿಯಂತಹ ಕಾರ್ಯಕ್ರಮ ಕಾಟಾಚಾರಕ್ಕೆ ನಡೆಯಬಾರದು ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಜಿಪಂ ಮಾಜಿ ಸದಸ್ಯ ಎಲ್.ಟಿ. ಪಾಟೀಲ ಮಾತನಾಡಿ, ಕನ್ನಡ ನಾಡು ಕಲೆ ಹಾಗೂ ಸಂಸ್ಕೃತಿಯಿಂದ ತುಂಬಿದ ನಾಡು. ಅದನ್ನು ಉಳಿಸಿ ಬೆಳಸಿಕೊಂಡು ಹೋಗುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಮಕ್ಕಳಲ್ಲಿರುವ ಪ್ರತಿಭೆ ಹೊರ ತರಲು ಸರ್ಕಾರ ಈ ಕಾರ್ಯಕ್ರಮ ಜಾರಿಗೆ ತಂದಿದೆ. ಪ್ರತಿಭಾ ಕಾರಂಜಿಯಲ್ಲಿ ಮಕ್ಕಳೊಂದಿಗೆ ಪಾಲಕರು ಕಾರ್ಯಕ್ರಮಕ್ಕೆ ಆಗಮಿಸಿ ಮಕ್ಕಳಿಗೆ ಹೆಚ್ಚು ಪೋ›ತ್ಸಾಹ ನೀಡುವಂತಹ ಕೆಲಸ ಮಾಡಬೇಕು ಎಂದರು.
ಪಟ್ಟಣ ಪಂಚಾಯಿತಿ ಉಪಾಧ್ಯಕ್ಷೆ ರಹಿಮಾಬಾನು ಕುಂಕೂರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಹಿರಳ್ಳಿ, ಜ್ಞಾನದೇವ ಗುಡಿಯಾಳ, ಬಿಇಒ ಶ್ರೀರಾಮ ಹೆಗಡೆ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸುಭಾಸ ಡೋರಿ, ವಿವಿಧ ಸಂಘಗಳ ಪದಾಧಿಕಾರಿಗಳಿದ್ದರು.
ಪಾಲನೆಯಾಗದ ಶಿಷ್ಟಾಚಾರ: ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮಕ್ಕೆ ಸರ್ಕಾರದಿಂದ ಅನುದಾನ ಬರುತ್ತದೆ. ಶಿಷ್ಟಾಚಾರದಂತೆ ಆಮಂತ್ರಣ ಪತ್ರಿಕೆ ಮುದ್ರಿಸಿಲ್ಲ ಹಾಗೂ ವೇದಿಕೆಯಲ್ಲಿ ಶಿಷ್ಟಾಚಾರವನ್ನು ಪಾಲನೆ ಮಾಡದಿರುವುದಕ್ಕೆ ಮಾಜಿ ಶಾಸಕ ವಿ.ಎಸ್. ಪಾಟೀಲ ಬೇಸರ ವ್ಯಕ್ತಪಡಿಸಿದರು. ಹಲವು ಶಿಕ್ಷಕರು ಆಕ್ರೋಶ ಹೊರಹಾಕಿದರು. ಕೆಲ ಶಿಕ್ಷಕರು ಶಿಕ್ಷಣ ಇಲಾಖೆ ತಮ್ಮದೆಂದು ಭಾವಿಸಿದ್ದಾರೆ. ಇಲಾಖೆಯ ಕಾರ್ಯಕ್ರಮಗಳಲ್ಲಿ ಸದಾಕಾಲ ಹಸ್ತಕ್ಷೇಪ ಮಾಡುತ್ತಾರೆ. ಇದೂ ಒಳ್ಳೆಯ ಬೆಳವಣಿಗೆಯಲ್ಲ ಎಂದು ಶಿಕ್ಷಕ ಎಂ.ಎಸ್. ಕಾರ್ಕಳ ವೇದಿಕೆಯ ಬಳಿ ಬಹಿರಂಗವಾಗಿ ಆಕ್ರೋಶ ಹೊರಹಾಕಿದರು.