

ಆಲಮಟ್ಟಿ: ಇಲ್ಲಿನ ಚಿಮ್ಮಲಗಿ ಭಾಗ-1ರಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಹುದಿನಗಳಿಂದ ಕಾರ್ಯನಿರ್ವಹಿಸುತ್ತಿರುವ ಬಿ.ಐ.ಖ್ಯಾಡಿ ಹಾಗೂ ಭಾರತಿ ಕೋಟೆನ್ನವರ ಅವರನ್ನು ಕೂಡಲೇ ವರ್ಗಾವಣೆಗೊಳಿಸಬೇಕು ಎಂದು ಗ್ರಾಮಸ್ಥರು ಕ್ಷೇತ್ರ ಶಿಕ್ಷಣಾಧಿಕಾರಿ ವಸಂತ ರಾಠೋಡ ಅವರಿಗೆ ಮನವಿ ಸಲ್ಲಿಸಿದರು.
ಮುಖಂಡರಾದ ಎಂ.ಆರ್.ಕಮತಗಿ, ಸಿ.ಎಸ್.ಉಪ್ಪಾರ, ಎಚ್.ಎ್.ಕಟ್ಟಿಮನಿ ಮಾತನಾಡಿ, ಈ ಶಾಲೆಗೆ ಹಲವು ವರ್ಷಗಳ ಹಿಂದೆ ವರ್ಗಾವಣೆಗೊಂಡ ಶಿಕ್ಷಕ ಬಿ.ಐ.ಖ್ಯಾಡಿ ಹಾಗೂ ಅವರ ಪತ್ನಿ ಭಾರತಿ ಕೋಟೆನ್ನವರ ಅವರು ಮಕ್ಕಳಿಗೆ ಸರಿಯಾಗಿ ಬೋಧನೆ ಮಾಡದ ಕಾರಣ ಮಕ್ಕಳ ಶೈಕ್ಷಣಿಕ ಗುಣಮಟ್ಟ ತೀವ್ರವಾಗಿ ಕುಸಿದಿದೆ. ಖ್ಯಾಡಿಯವರು ಶಾಲೆಗೆ ಸರಿಯಾಗಿ ಬರುವುದಿಲ್ಲ. ಮಕ್ಕಳಿಗೆ ಅರ್ಥವಾಗುವಂತೆ ಬೋಧನೆ ಮಾಡುವುದಿಲ್ಲ. ಅವರ ಪತ್ನಿ ಮೊಬೈಲ್ ನೋಡುವುದರಲ್ಲಿ ತಲ್ಲೀನರಾಗಿರುತ್ತಾರೆ. ಹೀಗಾದರೆ ಮಕ್ಕಳ ಭವಿಷ್ಯದ ಗತಿಯೇನು ಎಂದು ಪ್ರಶ್ನಿಸಿದರು.
ಹಲವಾರು ಬಾರಿ ಇಬ್ಬರ ನಡವಳಿಕೆ ಕುರಿತು ಶಿಕ್ಷಣ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಕೂಡಲೇ ಇಬ್ಬರು ಶಿಕ್ಷಕರನ್ನು ಬೇರೆ ಕಡೆ ವರ್ಗಾವಣೆ ಮಾಡದೆ ಇದ್ದರೆ ಶಿಕ್ಷಣ ಇಲಾಖೆ ವಿರುದ್ಧ ಗ್ರಾಮಸ್ಥರೆಲ್ಲರೂ ಸೇರಿ ಅನಿರ್ದಿಷ್ಟವಾಗಿ ಧರಣಿ, ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಇಬ್ಬರೂ ಶಿಕ್ಷಕರು ಕಳೆದ 2 ವರ್ಷದ ಹಿಂದೆಯೇ ಬೇರೆ ಕಡೆಗೆ ವರ್ಗಾವಣೆ ಮಾಡಿಸಿಕೊಂಡು ಹೋಗುವುದಾಗಿ ತಿಳಿಸಿದ್ದರು. ಆದರೆ ಇನ್ನೂವರೆಗೆ ವರ್ಗಾವಣೆಗೊಂಡಿಲ್ಲ. ಶಿಕ್ಷಣ ಇಲಾಖೆ ಮಕ್ಕಳ ಶೈಕ್ಷಣಿಕ ಅಭಿವೃದ್ಧಿ ಬಯಸುತ್ತಿದೆಯೋ ಅಥವಾ ಮಕ್ಕಳಿಗೆ ಅನಕ್ಷರತೆಗೆ ನಾಂದಿ ಹಾಡಲು ಇಂಥ ಶಿಕ್ಷಕರನ್ನು ವರ್ಗಾವಣೆಗೊಳಿಸದೆ ಇರಿಸಿಕೊಳ್ಳುತ್ತಿದೆಯೋ ಎಂದು ಆಪಾದಿಸಿದರು. ಖ್ಯಾಡಿ ದಂಪತಿ ಹಠಾವೋ, ಶಾಲೆ ಬಚಾವೋ ಎಂದು ಮಕ್ಕಳು ಘೋಷಣೆ ಕೂಗಿದರು.
ಶಿಕ್ಷಣ ಸಂಯೋಜಕ ಯು.ವೈ.ಬಶೆಟ್ಟಿ ಮಾತನಾಡಿ, ಇಬ್ಬರು ಶಿಕ್ಷಕರನ್ನು ಕೂಡಲೇ ತಾತ್ಕಾಲಿಕವಾಗಿ ನಿಯೋಜನೆ ಮೇರೆಗೆ ಬೇರೆ ಕಡೆ ಕಾರ್ಯ ನಿಯೋಜಿಸಲಾಗುವುದು. ಸಾರ್ವತ್ರಿಕ ವರ್ಗಾವಣೆ ವೇಳೆಯಲ್ಲಿ ಪೂರ್ಣವಾಗಿ ವರ್ಗಾಯಿಸಲು ಮೇಲಧಿಕಾರಿಗಳಲ್ಲಿ ಮನವಿ ಮಾಡಿಕೊಳ್ಳುವುದಾಗಿ ಹೇಳಿದರು.
ಎಸ್‌ಡಿಎಂಸಿ ಅಧ್ಯಕ್ಷ ವಿ.ಎಸ್.ಕಟ್ಟಿಮನಿ, ಎಂ.ಆರ್.ಕಮತಗಿ, ಸಿ.ಎಸ್.ಉಪ್ಪಾರ, ಬಾಬು ಓಂಕಾರೆಪ್ಪಗೋಳ, ಎಚ್.ಎ್.ಕಟ್ಟಿಮನಿ, ನಜೀರಸಾಬ ಮುದ್ದೇಬಿಹಾಳ, ಯಲ್ಲಪ್ಪ ಓಂಕಾರೆಪ್ಪಗೋಳ, ಹನುಮಂತ ಸಾಳೆ, ತಿಪ್ಪಣ್ಣ ಮಹೇಂದ್ರಕರ, ವಿ.ಕೆ.ಕಟ್ಟಿಮನಿ, ಜಿ.ಎಚ್.ಮುದ್ದೇಬಿಹಾಳ, ಎಸ್.ಬಿ.ಕೋತಿನ್, ಎಚ್.ಸಿ.ಓಂಕಾರೆಪ್ಪಗೋಳ, ಟಿ.ಎಸ್.ಕಟ್ಟಿಮನಿ, ಸೋಮು ಕಟ್ಟಿಮನಿ, ಎನ್.ಜಿ.ಮಹೆಂದ್ರಕರ ಇತರರಿದ್ದರು.