

ಹೊನ್ನಾಳಿ: ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಮಕ್ಕಳನ್ನು ಆಂಗ್ಲ ಮಾಧ್ಯಮದ ವ್ಯಾಮೋಹದಿಂದ ಖಾಸಗಿ ಶಾಲೆಗಳಿಗೆ ದಾಖಲು ಮಾಡುತ್ತಿರುವುದು ಸರಿಯಲ್ಲ ಎಂದು ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಚಂದ್ರಶೇಖರಪ್ಪ ಹೇಳಿದರು.
ಪಟ್ಟಣದ ಗುರುಭವನದಲ್ಲಿ ಹಮ್ಮಿಕೊಂಡಿದ್ದ ಅವಳಿ ತಾಲೂಕುಗಳ ಬಿಸಿಯೂಟ ತಯಾರಕರ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸರ್ಕಾರಿ ಶಾಲೆಗಳು ಈಗ ಹೈಟೆಕ್ ಶಾಲೆಗಳಾಗುತ್ತಿವೆ. ಮಕ್ಕಳಿಗೆ ಪೌಷ್ಟಿಕಾಂಶದ ಆಹಾರ ನೀಡುತ್ತಿದ್ದೇವೆ. ವಿವಿಧ ಪರೀಕ್ಷೆ ಬರೆಸುತ್ತಿದ್ದೇವೆ. ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯುವ ಕಾಲ ಹೋಯಿತು. ಸರ್ಕಾರಿ ಶಾಲೆ ಮಕ್ಕಳು ರ್ಯಾಂಕ್ ಕೂಡ ಪಡೆಯುತ್ತಿದ್ದು, ಮಕ್ಕಳನ್ನು ಸರ್ಕಾರಿ ಶಾಲೆಯಲ್ಲೇ ಓದಿಸಬೇಕು ಎಂದರು.
ತಾಲೂಕು ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ನಾಗೇಂದ್ರಪ್ಪ ಮಾತನಾಡಿ, ಬಿಸಿಯೂಟ ಯೋಜನೆ ಪ್ರಾರಂಭವಾದ ನಂತರ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಯಿತು. ಇದರಿಂದ ಸಾಕ್ಷರತೆ ಪ್ರಮಾಣ ಏರಿಕೆಯಾಗಿದೆ ಎಂದು ತಿಳಿಸಿದರು.
ಬಿಸಿಯೂಟ ತಯಾರಕರ ಫೆಡರೇಷನ್ ಮುಖಂಡ ಪುರವಂತರ ಪರಮೇಶ್ವರಪ್ಪ ಮಾತನಾಡಿ, ಬಿಸಿಯೂಟ ತಯಾರಕರಿಗೆ ಬಜೆಟ್ನಲ್ಲಿ ಗೌರವಧನ ಹೆಚ್ಚಳ ಮಾಡಬೇಕು. ಈ ಕುರಿತು ಶಿಕ್ಷಣ ಮಂತ್ರಿಯೊಂದಿಗೆ ಈಗಾಗಲೇ ಮಾತುಕತೆಯಾಗಿದ್ದು, ಸರ್ಕಾರದ ಗಮನಸೆಳೆಯಲು ಮಾರ್ಚ್ 5 ರಂದು ಬೆಂಗಳೂರಿನ ಫ್ರೀಡ್ಂ ಪಾರ್ಕ್ನಲ್ಲಿ ಹಮ್ಮಿಕೊಂಡಿರುವ ಧರಣಿಗೆ ಎಲ್ಲ ಅಡುಗೆಯವರು ಬರಬೇಕು ಎಂದು ಹೇಳಿದರು.
ಆರೋಗ್ಯ ಶಿಕ್ಷಣ ಇಲಾಖೆಯ ರಾಧಮ್ಮ ಶುಚಿತ್ವದ ಬಗ್ಗೆ ತಿಳಿಸಿದರು. ತಾಲೂಕು ಅಗ್ನಿಶಾಮಕ ದಳದ ಠಾಣಾಧಿಕಾರಿ ಪರುಶುರಾಮ್ ಅವರು ಬೆಂಕಿಯಿಂದ ಆಗುವ ಅನಾಹುತ ಮತ್ತು ಅವುಗಳ ನಿರ್ವಹಣೆ ಕುರಿತು ಮಾತನಾಡಿದರು.
ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಚಂದ್ರಶೇಖರಪ್ಪ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಪ್ರಕಾಶನಾಯ್ಕ, ಶಿಕ್ಷಕ ರಾಮಪ್ಪ, ಮಂಜುನಾಥ್, ಬಿ.ಎನ್. ಹನುಮಂತಪ್ಪ , ಫೆಡರೇಷನ್ನಿನ ಅಧ್ಯಕ್ಷೆ ಹಾಲಮ್ಮ, ಪದಾಧಿಕಾರಿಗಳಾದ ಲಲಿತಮ್ಮ ಮಂಗಳಗೌರಿ, ಜಯಮ್ಮ ಇತರರಿದ್ದರು.