

ಕುಷ್ಟಗಿ: ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಹೆಚ್ಚಿಸುವ ಕಾರ್ಯವನ್ನು ಶಿಕ್ಷಕರು ಮಾಡಬೇಕಿದೆ ಎಂದು ತಾಪಂ ಇಒ ಪಂಪಾಪತಿ ಹಿರೇಮಠ ಹೇಳಿದರು.
ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಸುಧಾರಣೆಗಾಗಿ ಪಟ್ಟಣದ ಗುರುಭವನದಲ್ಲಿ ತಾಲೂಕಿನ ವಿವಿಧ ಪ್ರೌಢಶಾಲೆ ಮುಖ್ಯಶಿಕ್ಷಕರಿಗೆ ಶನಿವಾರ ಏರ್ಪಡಿಸಿದ್ದ ಕಾರ್ಯಾಗಾರದಲ್ಲಿ ಮಾತನಾಡಿದರು.
ಇದನ್ನೂ ಓದಿ: ಶಿಕ್ಷಕರ ಮಾರ್ಗದರ್ಶನವಿಲ್ಲದೆ ಸಾಧನೆ ಅಸಾಧ್ಯ
ವಿದ್ಯಾರ್ಥಿಗಳಲ್ಲಿ ಪರೀಕ್ಷೆ ಬಗ್ಗೆ ಇರುವ ಭಯ, ಆತಂಕ ಹೋಗಲಾಡಿಸಬೇಕು. ಶಾಲೆಯಲ್ಲಿ ಹೇಳಿದ ಪಾಠಗಳನ್ನು ಕಂಠಪಾಠ ಮಾಡುವ ಬದಲು ಅರ್ಥೈಸಿಕೊಂಡು ಅಭ್ಯಾಸ ಮಾಡುವಂತೆ ತಿಳಿ ಹೇಳಬೇಕು. ಅಂಕ ಗಳಿಕೆಯೇ ಮಾನದಂಡವಾಗಬಾರದು. ಭವಿಷ್ಯದಲ್ಲಿ ಸ್ವಾವಲಂಬಿ ಜೀವನ ನಡೆಸುವಂತಹ ಕೌಶಲಗಳ ವೃದ್ಧಿ ವಿದ್ಯಾರ್ಥಿಗಳಲ್ಲಾಗಬೇಕಿದೆ ಎಂದರು.
ಪ್ರಭಾರ ಮುಖ್ಯ ಶಿಕ್ಷಕ ಜಗದೀಶಪ್ಪ ಮೇಣೆಧಾಳ ಮಾತನಾಡಿ, ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆ ವಿದ್ಯಾರ್ಥಿಗಳ ಕಲಿಕೆಯ ಮಾಹಿತಿ ಪಡೆದು ಕ್ರಿಯಾಯೋಜನೆ ರೂಪಿಸಬೇಕಿದೆ ಎಂದರು.
ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕ ಸೋಮನಗೌಡ ಪಾಟೀಲ್, ಬಿಆರ್‌ಪಿ ಡಾ.ಜೀವನಸಾಬ್ ವಾಲಿಕಾರ, ಮುಖ್ಯಶಿಕ್ಷಕರಾದ ಎಂ.ಎಂ. ಹಿರೇಗೊಣ್ಣಾಗರ, ವಾಯ್ ಬಿ.ಚೂರಿ, ದಾವಲ್‌ಸಾಬ ವಾಲೀಕಾರ, ಶಿವಾನಂದ ಪಂಪಣ್ಣವರ್, ರಾಘಪ್ಪ ಶ್ರೀರಾಮ್ ಇತರರು ಇದ್ದರು.