ಶಿಕ್ಷಕ ವೃತ್ತಿಗೆ ಚ್ಯುತಿ ಬಾರದಂತೆ ನಡೆಯಿರಿ

dj hlk mla chandrappa
Published on

ಹೊಳಲ್ಕೆರೆ: ಸಮಾಜದಲ್ಲಿ ಶಿಕ್ಷಕ ವೃತ್ತಿ ಎನ್ನುವುದು ಮಹತ್ವದ್ದಾಗಿದ್ದು, ಚ್ಯುತಿ ಬಾರದಂತೆ ನಡೆದುಕೊಳ್ಳುವುದು ಶಿಕ್ಷಕರ ಮೇಲಿನ ಬಹು ದೊಡ್ಡ ಜವಾಬ್ದಾರಿಯಾಗಿದೆ ಎಂದು ಶಾಸಕ ಡಾ.ಎಂ.ಚಂದ್ರಪ್ಪ ಹೇಳಿದರು.

ಪಟ್ಟಣದ ಸಂವಿಧಾನ ಸೌಧದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರಾಧಾಕೃಷ್ಣನ್ ಅವರು ಶಿಕ್ಷಕರಾಗಿದ್ದುಕೊಂಡೇ ರಾಷ್ಟ್ರಪತಿ ಆದರು.

ಅದೇ ರೀತಿ ಉಪನ್ಯಾಸಕಿಯಾಗಿದ್ದ ಬುಡಕಟ್ಟು ಜನಾಂಗದ ಮಹಿಳೆ ದ್ರೌಪದಿ ಮುರ್ಮು ಕೂಡ ಭಾರತದ ಪ್ರಥಮ ಮಹಿಳೆ ಹುದ್ದೆ ಅಲಂಕರಿಸಿದರು ಎಂದರು.

ಸರ್ಕಾರ ಯಾವುದೇ ಸೌಲಭ್ಯಕ್ಕೆ ಕಾಯದೇ, ನಿಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸುವುದು ಮುಖ್ಯ. ಮಕ್ಕಳಿಗೆ ಹೇಗೆ ಶಿಕ್ಷಣದ ಅಭಿರುಚಿ ಮೂಡಿಸುತ್ತೀರಾ ಎನ್ನುವುದರ ಮೇಲೆ ನಿಮ್ಮ ಗೌರವ ನಿಂತಿದೆ.

ಈ ಹಿಂದೆ ಗ್ರಾಮೀಣ ಭಾಗದಲ್ಲಿ ಶಿಕ್ಷಕರಿಗೆ ಅತ್ಯುನ್ನತ ಗೌರವ ಸಿಗುತ್ತಿತ್ತು. ಸೆ.5ಕ್ಕೆ ಶಿಕ್ಷಕರ ದಿನ ಮೀಸಲಾಗಬಾರದು. ಪ್ರತಿದಿನವೂ ಶಿಕ್ಷಕರ ದಿನವನ್ನು ಆಚರಿಸಬೇಕು ಎಂದು ತಿಳಿಸಿದರು.

ಸಮಾಜದಲ್ಲಿ ಶಿಕ್ಷಕ ವೃತ್ತಿ ಎನ್ನುವುದು ನಿಸ್ವಾರ್ಥ ಸೇವೆಯಾಗಿದೆ. ಇಂತಹ ಪವಿತ್ರವಾದ ಕೆಲಸ ಮಾಡುವ ಶಿಕ್ಷಕರು ನಿಜಕ್ಕೂ ಪುಣ್ಯವಂತರಾಗಿದ್ದೀರಾ. ತಮ್ಮ ಬಾಲ್ಯವಸ್ಥೆಯಲ್ಲಿ ಪಾಠ ಹೇಳಿಕೊಟ್ಟ ಗುರುಗಳನ್ನು ನೆನಪಿಸಿಕೊಂಡು ಮೆಚ್ಚುಗೆ ವ್ಯಕ್ತಪಡಿಸಿದರು.

ತಹಸೀಲ್ದಾರ್ ಬೀಬಿ ಫಾತಿಮಾ, ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಶ್ರೀನಿವಾಸ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರವಿಕುಮಾರ್,

ಪುರಸಭೆ ಸದಸ್ಯರಾದ ಆರ್.ಅಶೋಕ್, ಕೆ.ಸಿ.ರಮೇಶ್, ಎಚ್.ಆರ್.ನಾಗರತ್ನ ವೇದಮೂರ್ತಿ, ಶ್ರೀಕಾಂತ್, ಪಿ.ಆರ್.ಮಲ್ಲಿಕಾರ್ಜುನ, ಪಿ.ಎಚ್.ಮುರುಗೇಶ್, ಪರಸಪ್ಪ ಹುಲಮನಿ ಇತರರಿದ್ದರು.

ನಿವೃತ್ತ ಶಿಕ್ಷಕರು ಹಾಗೂ ತಾಲೂಕು ಮಟ್ಟದ ಉತ್ತಮ ಶಿಕ್ಷಕರನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net