

ರಾಯಚೂರು: ಶಿಕ್ಷಕರ ವರ್ಗಾವಣೆಯಿಂದ ರಾಯಚೂರು ಮತ್ತು ಯಾದಗಿರಿ ಜಿಲ್ಲೆಯಲ್ಲಿ ಸಮಸ್ಯೆಯಾಗಿರುವುದು ಗಮನಕ್ಕೆ ಬಂದಿದ್ದು, 13 ಸಾವಿರ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಶೀಘ್ರ ಪೂರ್ಣಗೊಳಿಸಲಾಗುತ್ತಿದ್ದು, ಶೇ.70ರಷ್ಟು ಶಿಕ್ಷಕರನ್ನು ಕಲ್ಯಾಣ ಕರ್ನಾಟಕ ಭಾಗಕ್ಕೆ ನಿಯುಕ್ತಿಗೊಳಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.
ಸ್ಥಳೀಯ ಪೂರ್ಣಿಮಾ ಆರ್ಯುವೇದಿಕೆ ವೈದ್ಯಕೀಯ ಕಾಲೇಜು ಸಭಾಂಗಣದಲ್ಲಿ ರಾಯಚೂರು ಜಿಲ್ಲೆ ವಿವಿಧ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದಿಂದ ಶುಕ್ರವಾರ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಮತ್ತು ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಶಿಕ್ಷಕರ ನೇಮಕಾತಿಗೆ ಸಂಬಂಸಿದಂತೆ ಪ್ರಕರಣ ನ್ಯಾಯಾಲಯದಲ್ಲಿದ್ದು, ವಿಚಾರಣೆ ಪೂರ್ಣಗೊಂಡು ತೀರ್ಪು ಕಾಯ್ದಿರಿಸಲಾಗಿದೆ. ನ್ಯಾಯಾಲಯ ಅನುಮತಿ ನೀಡುತ್ತಿದ್ದಂತೆ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು. ವರ್ಗಾವಣೆಯಿಂದಾಗಿ ಶಿಕ್ಷಕರ ಕೊರತೆ ಉಂಟಾಗಿರುವ ಶಾಲೆಗಳಲ್ಲಿ ಅತಿಥಿ ಶಿಕ್ಷಕ ನೇಮಕಾತಿಗೆ ಅವಕಾಶ ನೀಡಲಾಗಿದೆ.
ಸರ್ಕಾರಿ ಪ್ರೌಢಶಾಲೆಗಳ 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ಮೊಟ್ಟೆ ವಿತರಿಸುವ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಕೆಕೆಆರ್‌ಡಿಬಿಗೆ ನೀಡಲಾದ ಅನುದಾನದಲ್ಲಿ ಶೇ.25ರಷ್ಟು ಹಣವನ್ನು ಶಿಕ್ಷಣಕ್ಕೆ ನೀಡುವುದಾಗಿ ಮಂಡಳಿ ಅಧ್ಯಕ್ಷರು ಭರವಸೆ ನೀಡಿದ್ದಾರೆ.
ಮಕ್ಕಳಿಗೆ ಪರೀಕ್ಷೆ ಹೊರೆ, ಭಯ ನಿವಾರಿಸುವ ನಿಟ್ಟಿನಲ್ಲಿ ಮುಂದಿನ ವರ್ಷದಿಂದ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ವರ್ಷದಲ್ಲಿ ಮೂರು ಬಾರಿ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ. ಪ್ರಾಯೋಗಿಕವಾಗಿ ಈ ವರ್ಷವೇ ಪರೀಕ್ಷೆ ನಡೆಸಿ 42 ಸಾವಿರ ವಿದ್ಯಾರ್ಥಿಗಳಿಗೆ ಇದೇ ವರ್ಷದಲ್ಲಿ ಪ್ರವೇಶ ನೀಡುವ ವ್ಯವಸ್ಥೆ ಮಾಡಲಾಗಿದೆ.
ಖಾಸಗಿ ಶಾಲಾ, ಕಾಲೇಜುಗಳ ನಿವೇಶನ, ಆಸ್ತಿ ತೆರಿಗೆ ವಿನಾಯಿತಿ ನೀಡುವ ವಿಚಾರ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಗುವುದು. ಅಗ್ನಿಶಾಮಕ ಪರವಾನಗಿ ಸೇರಿದಂತೆ ಕೆಲ ನಿಯಮಗಳನ್ನು ಖಾಸಗಿ ಶಿಕ್ಷಣ ಸಂಸ್ಥೆಗಳು ಪಾಲಿಸಬೇಕು ಎಂದು ಮಧು ಬಂಗಾರಪ್ಪ ಹೇಳಿದರು.
ಸಣ್ಣ ನೀರಾವರಿ ಖಾತೆ ಸಚಿವ ಎನ್.ಎಸ್.ಬೋಸರಾಜು ಮಾತನಾಡಿ, ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವುದನ್ನು ಸರ್ಕಾರ ಪ್ರಮುಖ ಆದ್ಯತೆಯನ್ನಾಗಿ ಪರಿಗಣಿಸಿದೆ. ಗ್ಯಾರಂಟಿ ಯೋಜನೆಗಳ ಜತೆಗೆ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಬೇಕಾಗಿರುವ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ. ಶಾಲೆಗಳಿಗೆ ಮೂಲ ಸೌಕರ್ಯ, ಶಿಕ್ಷಕರ ನೇಮಕಾತಿ ಸೇರಿದಂತೆ ಅನೇಕ ಯೋಜನೆಗಳನ್ನು ಸರ್ಕಾರ ಮುಂದಿನ ದಿನಗಳಲ್ಲಿ ಜಾರಿಗೊಳಿಸಲಿದೆ ಎಂದರು.
ಒಕ್ಕೂಟದ ಅಧ್ಯಕ್ಷ ಹಾಗೂ ಶಾಸಕ ಹಂಪನಗೌಡ ಬಾದರ್ಲಿ ಮಾತನಡಿ, ಖಾಸಗಿ ಶಾಲಾ, ಕಾಲೇಜುಗಳು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಶ್ರಮಿಸುತ್ತಿವೆ. ಸರ್ಕಾರ ಸರ್ಕಾರಿ ಮತ್ತು ಖಾಸಗಿ ಶಾಲೆ ಎಂದು ತಾರತಮ್ಯ ಮಾಡದೆ ಖಾಸಗಿ ಶಾಲೆಗಳ ಅಭಿವೃದ್ಧಿಗೂ ಸಹಕರಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಎಂಎಲ್ಸಿ ಶಶೀಲ್ ನಮೋಶಿ, ಶಿಕ್ಷಣ ಇಲಾಖೆ ಈಶಾನ್ಯ ವಿಭಾಗದ ಆಯುಕ್ತ ಡಾ.ಆಕಾಶ, ಅಪರ ಜಿಲ್ಲಾಕಾರಿ ಡಾ.ಕೆ.ಆರ್.ದುರಗೇಶ, ಒಕ್ಕೂಟದ ಪ್ರಧಾನ ಕಾರ್ಯದರ್ಶಿ ನಾಗರಾಜ ಮಸ್ಕಿ, ಪದಾಕಾರಿಗಳಾದ ದೊಡ್ಡ ಬಸವರಾಜ, ಎಸ್.ಎಲ್.ಕೇಶವರೆಡ್ಡಿ ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.