

ಕಾರವಾರ: ಶಾಲೆಯ ಶಿಕ್ಷಕರು ಮಕ್ಕಳಿಗೆ ಶಿಕ್ಷಣ ನೀಡುವ ಜತೆಗೆ ಗ್ರಾಮದ ಅಭಿವೃದ್ಧಿಗೂ ನೆರವಾಗಿ ಮಾದರಿಯಾಗಿದ್ದಾರೆ. ತಾಲೂಕಿನ ನಗೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಅಕ್ತರ್ ಸಯ್ಯದ್ ಅವರು ಊರಿನ ರಸ್ತೆಯೊಂದರ ಅಭಿವೃದ್ಧಿಗೆ ಸ್ವಂತ ಹಣ ಖರ್ಚು ಮಾಡಿದ್ದಾರೆ.
ಕೋಳಿಮಂಕೆ ಗ್ರಾಮಕ್ಕೆ ತೆರಳುವ ರಸ್ತೆಯ ನಡುವೆ ಹರಿದ ಹಳ್ಳಕ್ಕೆ ಮಳೆಗಾಲದಲ್ಲಿ ದೊಡ್ಡ ಪ್ರಮಾಣದಲ್ಲಿ ಗುಡ್ಡದ ನೀರು ಬಂದು ವಿದ್ಯಾರ್ಥಿಗಳ ಓಡಾಟಕ್ಕೆ ತೊಂದರೆಯಾಗುತ್ತಿತ್ತು. ಗ್ರಾಮಸ್ಥರು ಶ್ರಮದಾನದಿಂದ ರಸ್ತೆಯ ನಡುವಿನ ಹಳ್ಳಕ್ಕೆ ಪೈಪ್ ಅಳವಡಿಸಿ, ಸಣ್ಣ ಸೇತುವೆ ನಿರ್ಮಿಸಿದರು. ಶಾಲೆಯ ಮುಖ್ಯ ಶಿಕ್ಷಕ ಅಕ್ತರ್ ಸಯ್ಯದ್ ಅವರು ಜೆಸಿಬಿ ಖರ್ಚನ್ನು ವಹಿಸಿಕೊಂಡು ರಸ್ತೆ ನಿರ್ಮಾಣಕ್ಕೆ ಸುಮಾರು 20 ಲೋಡ್ ಮಣ್ಣು ಒದಗಿಸಿಕೊಟ್ಟರು. ಅಲ್ಲದೇ 40 ರಿಂದ 50 ಲೋಡ್ ಮಣ್ಣು ಹಾಕಿ ಉದ್ಭವ ಲಿಂಗ ದೇವಸ್ಥಾನದ ಆವರಣವನ್ನೂ ಸಮತಟ್ಟು ಮಾಡಿಸಿಕೊಟ್ಟರು. ಶಿಕ್ಷಕರ ಕಾರ್ಯಕ್ಕೆ ಕೋಳಿಮಂಕೆ ಗ್ರಾಮ ಅರಣ್ಯ ಸಮಿತಿಯ ಅಧ್ಯಕ್ಷ ರಾಮ ಗೋರಖ್ಯ ಗೌಡ ಅಭಿನಂದನೆ ಸಲ್ಲಿಸಿದ್ದಾರೆ.