

ಬೆಳಗಾವಿ: ಸಮೃದ್ಧ ಸಮಾಜ ಕಟ್ಟುವ ಶಕ್ತಿ ಶಿಕ್ಷಕರಲ್ಲಿ ಆಗಾಧವಾಗಿದೆ ಎಂದು ಐಎಎಂ ಇನ್‌ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜಮೆಂಟ್ ಸಂಸ್ಥಾಪಕ ನಿರ್ದೇಶಕ ಗೌಡೇಶ್ ಪಾಟೀಲ ಹೇಳಿದರು.
ನಗರದ ಅಯೋಧ್ಯ ಸಭಾಂಗಣದಲ್ಲಿ ಭಾನುವಾರ ಐಎಎಂ ಇನ್‌ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜಮೆಂಟ್ ಹಮ್ಮಿಕೊಂಡಿದ್ದ ಶಿಕ್ಷಕರ ಗೌರವ-ಸಮ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಂದೆ-ತಾಯಿ ತಮ್ಮ ಮಕ್ಕಳನ್ನು ಮಾತ್ರ ಸುಧಾರಿಸಬಹುದು. ಆದರೆ, ಶಿಕ್ಷಕರು ನೂರಾರು ಮಕ್ಕಳನ್ನು ಒಟ್ಟಿಗೆ ಬೆಳೆಸುವ ಶಕ್ತಿ ಹೊಂದಿದ್ದಾರೆ. ಅಂತಹ ಶಿಕ್ಷಕರನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಹೆಚ್ಚೆಚ್ಚು ನಡೆಯಬೇಕಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಂ.ಎಂ.ಕಾಂಬಳೆ ಮಾತನಾಡಿ, ಶಿಕ್ಷಕರ ಬೋಧನೆ ಕಪ್ಪುಹಲಗಿಗೆ ಮಾತ್ರ ಸೀಮಿತಗೊಳ್ಳಬಾರದು. ಕ್ರಿಯಾತ್ಮಕ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳನ್ನು ಓದಿನತ್ತ ಆಕರ್ಷಿಸಬೇಕು. ಶಿಕ್ಷಕರು ಕೆಲಸವನ್ನು ಸೇವೆ ಎಂದು ಪರಿಗಣಿಸಬೇಕು ಎಂದು ಸಲಹೆ ನೀಡಿದರು. ಶಿಕ್ಷಕರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಐಎಎಂ ಇನ್‌ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜಮೆಂಟ್ ಹಮ್ಮಿಕೊಳ್ಳುತ್ತಿರುವ ಚಟುವಟಿಕೆಗಳು ಸಮಾಜಕ್ಕೆ ಮಾದರಿ ಎಂದರು. ಜಿಲ್ಲೆಯ ವಿವಿಧ ಶಾಲೆಗಳ 42 ಆದರ್ಶ ಶಿಕ್ಷಕರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಸರ್ದಾರ್ ಕಾಲೇಜ ಪ್ರಾಚಾರ್ಯ ವೈ.ಎಂ.ಪಾಟೀಲ, ಪಿಯು ಕಾಲೇಜ್ ಪ್ರಾಚಾರ್ಯರ ಸಂಘದ ಅಧ್ಯಕ್ಷ ರವೀಂದ್ರ ಪಾಟೀಲ, ಐಎಎಂ ನಿರ್ದೇಶಕಿ ಸೌಮ್ಯಾ ಪಾಟೀಲ, ಗೀತಾ ಬಸನ್ನವರ, ಅಂಕುಶ ಗಾಗ್, ಅನುರಾಜ ಬೈಲಹೊಂಗಲ ಇತರರು ಇದ್ದರು.