

ಸಿದ್ದಾಪುರ: ಜನಗಣತಿ ಸಮಿಕ್ಷೆಗೆಂದು ಬೈಕ್‌ನಲ್ಲಿ ತೆರಳುತ್ತಿದ್ದ ಸಿಬ್ಬಂದಿ ಮೇಲೆ ಸೋಮವಾರ ಕಾಡಾನೆ ದಾಳಿ ಮಾಡಿದೆ.
ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರಡಿಗೋಡು ಮಾಲ್ದಾರೆ, ಅವರೆಗುಂದ, ದುಬಾರೆಗೆ ಬೈಕ್‌ನಲ್ಲಿ ತೆರಳುತ್ತಿದ್ದ ಗೊಣಿಕೊಪ್ಪಲು ಪ್ರೌಢಶಾಲೆ ಶಿಕ್ಷಕ ಶಿವರಾಂ ಮೇಲೆ ಬಸವನಹಳ್ಳಿ ಬಳಿ ಕಾಡಾನೆ ದಾಳಿಗೆ ಯತ್ನಿಸಿದೆ. ಇದರಿಂದ ಭಯಗೊಂಡ ಚಾಲಕ ಬೈಕ್ ಅನ್ನು ತಿರುಗಿಸುವ ಸಂದರ್ಭದಲ್ಲಿ ನಿಯಂತ್ರಣ ಕಳೆದುಕೊಂಡು ಕೆಳಗೆ ಬಿದ್ದು ಗಾಯಗೊಂಡಿದ್ದಾರೆ. ಬಳಿಕ ಗಾಡಿಯನ್ನು ಬಿಟ್ಟು ಓಡಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ವಿಷಯ ತಿಳಿದು ತಕ್ಷಣಕ್ಕೆ ಸ್ಥಳಕ್ಕೆ ಆಗಮಿಸಿದ ಸ್ಥಳೀಯ ನಿವಾಸಿಗಳು, ಗಾಯಾಳುವನ್ನು ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ಸ್ಥಳಕ್ಕೆ ತಹಸೀಲ್ದಾರ್ ಪ್ರವೀಣ್ ಅಮ್ಮತ್ತಿ, ಕಂದಾಯ ಪರಿವೀಕ್ಷರ ಅನಿಲ್, ಕ್ಷೇತ್ರ ಶಿಕ್ಷಣಾಧಿಕಾರಿ ಆನಂದ್, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಮಹೇಶ್ ಭೇಟಿ ನೀಡಿ ಸಿಬ್ಬಂದಿಯ ಯೋಗಕ್ಷೇಮ ವಿಚಾರಿಸಿದರು.