

ಶಿರ್ವ: ಶ್ರೀಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದ 2025-26ನೇ ಶೈಕ್ಷಣಿಕ ಸಾಲಿನ ಶಿಕ್ಷಕ-ರಕ್ಷಕ ಸಭೆ ಶನಿವಾರ ಸಂಸ್ಥೆಯ ಆವರಣದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ಮೂಲ ವಿಜ್ಞಾನ ವಿಭಾಗ ಮತ್ತು ಸಮಾಲೋಚನಾ ಘಟಕದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ ಜೀವನದ ಸವಾಲುಗಳ ಮೂಲಕ ಹದಿಹರೆಯದವರನ್ನು ಬೆಂಬಲಿಸುವ ಕಲೆ ಎಂಬ ವಿಷಯದ ಕುರಿತು ಉಪನ್ಯಾಸ ನಡೆಯಿತು.
ಡಾ.ಎ.ವಿ.ಬಾಳಿಗ ಮೆಮೋರಿಯಲ್ ಆಸ್ಪತ್ರೆಯ ಆರೋಗ್ಯ ತಜ್ಞ ಡಾ.ವಿರೂಪಾಕ್ಷ ದೇವರಮನೆ ಉಪನ್ಯಾಸ ನೀಡಿ, ಹದಿಹರೆಯದ ಮಕ್ಕಳ ಜೀವನದಲ್ಲಿ ಎದುರಾಗುವ ಮಾನಸಿಕ, ಭಾವನಾತ್ಮಕ ಹಾಗೂ ಸಾಮಾಜಿಕ ಸವಾಲುಗಳ ಬಗ್ಗೆ ಪಾಲಕರಿಗೆ ಸೂಕ್ತ ಮಾರ್ಗದರ್ಶನ ನೀಡಿದರು. ಶಿಸ್ತು, ಧೂಮಪಾನ, ತರಗತಿ ಗೈರು, ಹತಾಶೆ, ಆಲಸ್ಯ ಮುಂತಾದ ವಿಷಯಗಳ ಕುರಿತು ಚರ್ಚಿಸಿದರು. ಪಾಲಕರು ತಮ್ಮ ಮಕ್ಕಳೊಂದಿಗೆ ಸಂವಾದ ನಡೆಸಿ, ಸಾಮಾಜಿಕ ಆತಂಕ, ಆತ್ಮಹತ್ಯೆಯ ಅಪಾಯ ಮುಂತಾದ ಗಂಭೀರ ಸಮಸ್ಯೆ, ಪಾಲಕರು ತಮ್ಮ ಮಕ್ಕಳ ನಡವಳಿಕೆಯಲ್ಲಿ ಬದಲಾವಣೆ ಕಂಡರೆ ತಕ್ಷಣವೇ ತಜ್ಞರ ನೆರವು ಪಡೆಯಬೇಕೆಂಬ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರಾಂಶುಪಾಲ ಡಾ.ತಿರುಮಲೇಶ್ವರ ಭಟ್ ಶಿಕ್ಷಕ-ರಕ್ಷಕ ಸಭೆಗಳ ಅಗತ್ಯತೆ ಮತ್ತು ಲಾಭಗಳ ಬಗ್ಗೆ ಮಾತನಾಡಿದರು. ಈ ಸಂದರ್ಭದಲ್ಲಿ ಮೊದಲ ಸೆಮಿಸ್ಟರ್ನಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಡೀನ್ಗಳು, ವಿಭಾಗದ ಮುಖ್ಯಸ್ಥರು ಮತ್ತು ಅಧ್ಯಾಪಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.