

ಮಂಡ್ಯ: ಜ್ಞಾನರ್ಜನೆ ಯಾರು ಕದಿಯಲಾರದು ವಸ್ತು. ಹಾಗಾಗಿ ಪ್ರತಿಯೊಬ್ಬರು ತಮ್ಮ ಸಾಮರ್ಥ್ಯದಿಂದ ವಿದ್ಯಾವಂತರಾಗಿ ಎಂದು ವಿಷಯ ಪರಿವೀಕ್ಷಕ ನಾಗರಾಜು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಇಲ್ಲಿನ ಗಾಂಧಿನಗರದಲ್ಲಿ ಕನ್ನಿಕಾ ಶಿಲ್ಪ ನವೋದಯ ಎಜುಕೇಷನಲ್ ಟ್ರಸ್ಟ್‌ನಲ್ಲಿ ಆಯೋಜಿಸಿದ್ದ ನವೋದಯ ಶಾಲೆಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಅಭಿನಂದನೆ ಹಾಗೂ ಉತ್ತಮ ಶಿಕ್ಷಕರಿಗೆ ಗುರುವಂದನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನವೋದಯ ಪರೀಕ್ಷೆಗೆ ಆಯ್ಕೆಯಾಗದವರು ಬೇಸರ ಪಟ್ಟುಕೊಳ್ಳುವ ಅಗತ್ಯವಿಲ್ಲ. ಪರೀಕ್ಷೆಗೆ ತರಬೇತಿ ಪಡೆಯುವುದರಿಂದ ಗಣಿತ ಹಾಗೂ ವಿಜ್ಞಾನ ವಿಷಯಗಳ ಬಗ್ಗೆ ಹೆಚ್ಚಿನ ಜ್ಞಾನ ಪಡೆದಂತಾಗುತ್ತದೆ. ಡಾ.ಕನ್ನಿಕಾ ಅವರು ಕಳೆದ 28 ವರ್ಷದಿಂದ ನವೋದಯ ಶಾಲೆಗಷ್ಟೇ ಅಲ್ಲದೆ ಮುರಾರ್ಜಿ, ಸೈನಿಕ ಶಾಲೆ, ಕಿತ್ತೂರು ರಾಣಿ ಚೆನ್ನಮ್ಮ ಶಾಲೆಗಳ ಪ್ರವೇಶಕ್ಕೂ ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿದ್ದಾರೆ. ವಿದ್ಯಾರ್ಥಿಗಳು ಇದನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ತರಬೇತಿ ಸಂಸ್ಥೆಯ ಸಂಸ್ಥಾಪಕಿ ಡಾ.ಕನ್ನಿಕಾ ಮಾತನಾಡಿ, ಪರಿಶ್ರಮವಿದ್ದರೆ ಮಾತ್ರ ಯಶಸ್ಸು ಸಾಧಿಸಲು ಸಧ್ಯ. ವಿದ್ಯೆ ಅನ್ನುವುದನ್ನು ಪಡೆಯಲು ಪರಿಶ್ರಮ ಅಗತ್ಯ. ನೀವು ಈಗ 15 ವರ್ಷ ಪರಿಶ್ರಮಪಟ್ಟರೆ, 80 ವರ್ಷ ನೆಮ್ಮದಿ ಜೀವನ ಮಾಡಬಹುದು ಎಂದರು.
ಒಕ್ಕಲಿಗ ಮಹಾಸಭಾ ರಾಜ್ಯ ಪ್ರಧಾನ ಕಾರ್ಯದರ್ಶಿ ವರಲಕ್ಷ್ಮೀ ಕಾರ್ಯಕ್ರಮ ಉದ್ಘಾಟಿಸಿದರು. ಪ್ರೌಢಶಾಲಾ ಸಹಶಿಕ್ಷಕರ ಸಂಘ ಅಧ್ಯಕ್ಷ ಎಂ.ಇ.ಶಿವಣ್ಣ ಮಂಗಲ, ನಿರ್ಮಲಾ, ಜಯರತ್ನ ಇತರರಿದ್ದರು.
ಇದೇ ಸಂದರ್ಭದಲ್ಲಿ ಉತ್ತಮ ಶಿಕ್ಷಕರಾದ ಸಿ.ಶ್ರೀನಿವಾಸಚಲ, ಹೇಮಾವತಿ, ಕೆ.ಆರ್.ಶಶಿಧರ್ ಈಚಗೆರೆ, ಎ.ಎಸ್.ರಾಹುಲ್, ಎಂ.ವೈ.ಶ್ವೇತಾ ಅವರನ್ನು ಸನ್ಮಾನಿಸಲಾಯಿತು.