ಹೊಸ ಶಿಕ್ಷಣ ನೀತಿ ಪ್ರಾಯೋಗಿಕವಾಗಿ ಜಾರಿ ಅಸಾಧ್ಯ

udp-18-teacher
Published on

ಉಡುಪಿ: ಜಾಗತಿಕ ಬದಲಾವಣೆಗೆ ತಕ್ಕಂತೆ ಭಾರತೀಯ ಶಿಕ್ಷಣದಲ್ಲಿಯೂ ಮಾರ್ಪಾಡುಗಳನ್ನು ಮಾಡುವುದು ಇಂದಿನ ಅಗತ್ಯ. ಪ್ರತಿ 15 ವರ್ಷಕ್ಕೊಮ್ಮೆ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಆಯಾಮಗಳನ್ನು ಪರಿಚಯಿಸಬೇಕು. ಕೇಂದ್ರ ಸರ್ಕಾರ 30 ವರ್ಷದ ಬಳಿಕ ಹೊಸ ಶಿಕ್ಷಣ ನೀತಿ ಜಾರಿಗೊಳಿಸಿದೆ. ಇದರಲ್ಲಿ ಅನೇಕ ಲೋಪದೋಷಗಳಿದ್ದು, ಪ್ರಾಯೋಗಿಕವಾಗಿ ಜಾರಿ ಅಸಾಧ್ಯ ಎಂದು ಹೈದರಾಬಾದಿನ ಕೇಂದ್ರೀಯ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ರಾಮ್​ ರಾಮಸ್ವಾಮಿ ಹೇಳಿದರು.

ಶುಕ್ರವಾರ ಯಕ್ಷಗಾನ ಕಲಾರಂಗ ಐವೈಸಿ ಸಭಾಂಗಣದಲ್ಲಿ ಭಾರತೀಯ ಜ್ಞಾನ-ವಿಜ್ಞಾನ ಸಮಿತಿ ವತಿಯಿಂದ ಆಯೋಜಿಸಿದ್ದ 2 ದಿನಗಳ ಟೀಚರ್​ ಶೈಕ್ಷಣಿಕ ಹಬ್ಬವನ್ನು ಉದ್ಘಾಟಿಸಿ ಮಾತನಾಡಿದರು.

ನಿಗದಿತ ಅವಧಿಯಲ್ಲಿ ಪದವಿ ಶಿಕ್ಷಣ ಪೂರ್ಣಗೊಳಿಸದೆ ಅರ್ಧದಲ್ಲಿ ಬಿಟ್ಟರೂ ಪ್ರಮಾಣಪತ್ರ ನೀಡುವ ಪದ್ಧತಿ ಒಳ್ಳೆಯದಲ್ಲ. ಪಠ್ಯಕ್ರಮದಲ್ಲಿ ಇಂಡಿಯನ್​ ನಾಲೆಜ್​ ಸಿಸ್ಟಮ್​ ಅಳವಡಿಕೆಗೆ ಒತ್ತು ನೀಡಿರುವುದು ಬಹುತ್ವದ ಸಮಾಜದಲ್ಲಿ ಅಪಾಯಕಾರಿ ಚಿಂತನೆ. ಆನ್​ಲೈನ್​ ಶಿಕ್ಷಣಕ್ಕೆ ಮಾನ್ಯತೆ ಸಲ್ಲದು. ವಿದ್ಯಾರ್ಥಿಗಳಿಗೆ ಪ್ರಾಕ್ಟಿಕಲ್​ ಶಿಕ್ಷಣವೂ ತುಂಬಾ ಮುಖ್ಯವಾಗಿದೆ. ಹೊಸ ನೀತಿಗೆ ತಕ್ಕಂತೆ ಮೂಲಸೌಕರ್ಯ ಒದಗಿಸದೆ ಹಳೆ ವಿಧಾನವನ್ನು ಸಂಪೂರ್ಣ ಬದಲಾಯಿಸಿರುವುದು ಗೊಂದಲಕ್ಕೆ ಕಾರಣವಾಗಿದೆ ಎಂದರು.

ಜನಸಂಖ್ಯೆ ಬೆಳವಣಿಗೆ ಅನುಗುಣವಾಗಿ ವಿಶ್ವವಿದ್ಯಾಲಯಗಳ ಸಂಖ್ಯೆ ಕಡಿಮೆ. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಶಿಕ್ಷಣ ಕ್ಷೇತ್ರದಲ್ಲಿ ಕಡಿಮೆ ಹೂಡಿಕೆ ಮಾಡುತ್ತಿವೆ. ಜಿಡಿಪಿಯ ಶೇ. 6ರಷ್ಟು ಮೊತ್ತವನ್ನು ಶಿಕ್ಷಣಕ್ಕೆ ವೆಚ್ಚ ಮಾಡಬೇಕು ಎಂಬ ವಾದಗಳಿವೆ. ವಾಸ್ತವದಲ್ಲಿ ಶಿಕ್ಷಣಕ್ಕೆ ವೆಚ್ಚ ಮಾಡುವಲ್ಲಿ ಮಿತಿ ತೆಗೆದುಹಾಕಬೇಕು. ಅಗತ್ಯವಿರುವಲ್ಲಿ ಖರ್ಚು ಮಾಡಬೇಕು ಎಂದರು.

ಶಿಕ್ಷಣ ತಜ್ಞ ಡಾ.ಮಹಾಬಲೇಶ್ವರ ರಾವ್​ ಮಾತನಾಡಿ, ರಾಜಕೀಯ ವಿಪ್ಲವಗಳಿಂದ ಪ್ರಾಧ್ಯಾಪಕರು, ಉಪಕುಲಪತಿಗಳು, ಅಧಿಕಾರಿಗಳು ಸರ್ಕಾರದ ಅಡಿಯಾಳಾಗಿ ಕೆಲಸ ಮಾಡುವ ಸ್ಥಿತಿ ಬಂದಿದೆ. ಸದ್ಯದ ಶಿಕ್ಷಣ ವ್ಯವಸ್ಥೆ ಸ್ಥಿರತೆ ಕಾಣುತ್ತಿಲ್ಲ. ಅಂಕ ಪ್ರಧಾನ ಶಿಕ್ಷಣದಿಂದ ವೈಜ್ಞಾನಿಕ ಚಿಂತನೆ, ವೈಚರಿಕತೆ ಕಡಿಮೆಯಾಗುತ್ತಿದೆ ಎಂದರು. ಭಾರತೀಯ ಜ್ಞಾನ&ವಿಜ್ಞಾನ ಸಮಿತಿ ಕೋಶಾಧಿಕಾರಿ ಪ್ರೊ. ಕಮಲ್​ ಲೋದಯ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಟಿ. ಎ. ಪ್ರಶಾಂತ್​ ಬಾಬು, ಉದಯ್​ ಗಾಂವಕರ್​, ಶುಭಂಕರ್​ ಚಕ್ರವರ್ತಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ವಿವಿಧ ಗೋಷ್ಠಿಗಳಲ್ಲಿ ಶೈಕ್ಷಣಿಕ ನೀತಿಗಳು, ಅನುಷ್ಠಾನದಲ್ಲಿ ಎದುರಾಗಿರುವ ಸವಾಲುಗಳ ಕುರಿತು ಚರ್ಚೆ, ಉಪನ್ಯಾಸ, ಸಂವಾದ ನಡೆಯಿತು. ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಪಿ.ವಿ ಭಂಡಾರಿ ಸ್ವಾಗತಿಸಿ, ಸಂತೋಷ್​ ನಾಯಕ್​ ಪಟ್ಲ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net