ಬೈಕ್ ಅಪಘಾತದಲ್ಲಿ ಶಿಕ್ಷಕಿ ಮೃತ್ಯು, ಕಂಬನಿ ಮಿಡಿದ ವಿದ್ಯಾರ್ಥಿಗಳು

Teacher
Published on

ಕುಂದಾಪುರ: ರಸ್ತೆಯಲ್ಲಿ ದನ ಅಡ್ಡ ಬಂದು ಬೈಕ್ ಸ್ಕಿಡ್ ಆದ ಪರಿಣಾಮ ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡಿದ್ದ ಹಿಂಬದಿ ಸೀಟಿನಲ್ಲಿದ್ದ ಮುದೂರು ಸೆಳ್ಕೋಡು ನಿವಾಸಿ, ಹೆಮ್ಮಾಡಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಸಹ ಶಿಕ್ಷಕಿ ಅಂಬಿಕಾ(32) ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ತಡರಾತ್ರಿ ಮೃತಪಟ್ಟಿದ್ದಾರೆ.


ನಾವುಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿರುವ ಪತಿ ಶ್ರೀಕಾಂತ್ ಅವರೊಂದಿಗೆ ಗುರುವಾರ ಬೆಳಗ್ಗೆ ಮುದೂರಿನಿಂದ ಬೈಕ್‌ನಲ್ಲಿ ಮನೆಯಿಂದ ಹೊರಟಿದ್ದರು. ವಂಡ್ಸೆ ಸಮೀಪ ರಸ್ತೆಯಲ್ಲಿ ಏಕಾಏಕಿ ದನ ಅಡ್ಡಬಂದ ಪರಿಣಾಮ ಬೈಕ್ ನಿಯಂತ್ರಣ ತಪ್ಪಿ ಸ್ಕಿಡ್ ಆಗಿ ಬಿದ್ದಿದ್ದಾರೆ. ಶ್ರೀಕಾಂತ್ ಅವರಿಗೆ ಸಣ್ಣಪುಟ್ಟ ಗಾಯವಾಗಿದ್ದು, ಹಿಂಬದಿ ಕುಳಿತಿದ್ದ ಅಂಬಿಕಾ ಅವರ ತಲೆ ಭಾಗಕ್ಕೆ ಗಂಭೀರ ಪೆಟ್ಟಾಗಿತ್ತು. ಕೂಡಲೇ ಅವರನ್ನು ಉಡುಪಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ ಮೃತಪಟ್ಟಿದ್ದಾರೆ. ದಂಪತಿಗೆ ಒಂದೂವರೆ ವರ್ಷದ ಮಗುವಿದೆ.

ಕಣ್ಣೀರಿಟ್ಟ ವಿದ್ಯಾರ್ಥಿಗಳು: 2018ರಲ್ಲಿ ಹೆಮ್ಮಾಡಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ವೃತ್ತಿ ಜೀವನ ಆರಂಭಿಸಿದ್ದ ಅಂಬಿಕಾ ವಿದ್ಯಾರ್ಥಿಗಳ ನೆಚ್ಚಿನ ಶಿಕ್ಷಕಿಯಾಗಿದ್ದರು. ಅವರು ಮೃತಪಟ್ಟ ಸುದ್ದಿ ತಿಳಿದ ವಿದ್ಯಾರ್ಥಿಗಳು ಕಂಬನಿ ಮಿಡಿದರು. ಶುಕ್ರವಾರ ಬೆಳಗ್ಗೆಯಿಂದಲೇ ಶಿಕ್ಷಕಿಯ ಪಾರ್ಥಿವ ಶರೀರ ಶಾಲಾ ಆವರಣಕ್ಕೆ ಬರುವುದನ್ನು ಕಾಯುತ್ತಿದ್ದ ವಿದ್ಯಾರ್ಥಿಗಳು, ಪಾಲಕರು, ಸಹೋದ್ಯೋಗಿಗಳು, ಶಿಕ್ಷಕರ ಸಂಘಟನೆಯವರ ಸಹಿತ ಸ್ಥಳೀಯರು ಮಧ್ಯಾಹ್ನ ಮರಣೋತ್ತರ ಪರೀಕ್ಷೆ ಬಳಿಕ ತರಲಾದ ಪಾರ್ಥಿವ ಶರೀರವನ್ನು ನೋಡುತ್ತಿದ್ದಂತೆ ಭಾವುಕರಾದರು. ವಿದ್ಯಾರ್ಥಿಗಳು ಪಾರ್ಥಿವ ಶರೀರದ ಮೇಲೆ ಹೂಬೊಕ್ಕೆಗಳನ್ನಿಟ್ಟು ಅಂತಿಮ ನಮನ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net