ಅವ್ಯವಸ್ಥೆ ಆಗರವಾದ ವಸತಿ ಶಾಲೆ

dj hsd vasathi shale
Published on

ಹೊಸದುರ್ಗ: ಶಾಲಾ ಕೊಠಡಿಯಲ್ಲಿ ಕುಳಿತು ಪಾಠ ಕೇಳಲು ಬೆಂಚುಗಳಿಲ್ಲ, ರಾತ್ರಿ ಮಲಗಲು ಮಂಚದ ವ್ಯವಸ್ಥೆಯಿಲ್ಲ, ವಸತಿ ಗೃಹಗಳಿದ್ದರೂ ಶಿಕ್ಷಕರ ವಾಸ್ತವ್ಯವಿಲ್ಲ.

ಇಂತಹ ಹಲವಾರು ಸಮಸ್ಯೆಗಳು ಗುರುವಾರ ತಾಲೂಕಿನ ನಾಯಿಗೆರೆ ಬಳಿಯ ಇಂದಿರಾಗಾಂಧಿ ವಸತಿ ಶಾಲೆ ಹಾಗೂ ಮಾಳಪ್ಪನಹಳ್ಳಿ

ಮುರಾರ್ಜಿ ದೇಸಾಯಿ ವಸತಿ ಶಾಲೆಗಳಿಗೆ ಶಾಸಕ ಬಿ.ಜಿ.ಗೋವಿಂದಪ್ಪ ಭೇಟಿ ನೀಡಿ ಶಿಕ್ಷಕರು-ಮಕ್ಕಳೊಂದಿಗೆ ನಡೆಸಿದ ಸಮಾಲೋಚನೆ ಸಂದರ್ಭದಲ್ಲಿ ಅನಾವರಣಗೊಂಡವು.

ಅವ್ಯವಸ್ಥೆ ಕಂಡು ಗರಂ ಆದ ಶಾಸಕರು, ಸರ್ಕಾರ ಶೈಕ್ಷಣಿಕ ಪ್ರಗತಿಗೆ ಕೊರತೆ ಆಗದಂತೆ ಸೌಲಭ್ಯ ಕಲ್ಪಿಸಿದರೂ ತಲುಪಿಸದಿರುವುದು ಸರಿಯಲ್ಲ ಎಂದರು.

ಸರ್ಕಾರ ಎಸ್ಸಿ-ಎಸ್ಟಿ, ಹಿಂದುಳಿದ ವರ್ಗಗಳ ಮಕ್ಕಳಿಗೆ ಶಿಕ್ಷಣ ಪ್ರಗತಿಗೆ ಸಾಕಷ್ಟು ಅನುದಾನ ನೀಡುತ್ತಿದೆ.

2013-18ರಲ್ಲಿ ನಾನು ಶಾಸಕನಾಗಿದ್ದ ವೇಳೆ ತಾಲೂಕಿನ ಮಕ್ಕಳಿಗೆ ಉತ್ತಮ ಶೈಕ್ಷಣಿಕ ಸೌಲಭ್ಯ ಒದಗಿಸುವ ಉದ್ದೇಶದಿಂದ ವಸತಿ ಶಾಲೆಗಳನ್ನು ಆರಂಭಿಸಲಾಗಿತ್ತು.

ಇಂದಿರಾಗಾಂಧಿ ವಸತಿ ಶಾಲೆಯಲ್ಲಿ ಶಿಕ್ಷಕರ ವಾಸ್ತವ್ಯಕ್ಕಾಗಿ 10ಕ್ಕೂ ಹೆಚ್ಚು ವಸತಿಗೃಹಗಳನ್ನು ನಿರ್ಮಿಸಲಾಗಿದೆ. ಆದರೆ, ಶಿಕ್ಷಕರು ಬೇರೆಡೆ ಮನೆ ಮಾಡಿ ಅಲ್ಲಿಗೆ ತೆರಳುವುದು ಸರ್ಕಾರದ ನಿಯಮ ಉಲ್ಲಂಘಿಸಿದಂತೆ ಎಂದರು.

ಪಾಲಕರು ಹಾಗೂ ಮನೆ ತೊರೆದು ವಿದ್ಯಾಭ್ಯಾಸಕ್ಕೆ ಬರುವ ಮಕ್ಕಳ ಮನಸ್ಥಿತಿ ಅರಿತುಕೊಳ್ಳಬೇಕು. ಅವರ ಸಮಗ್ರ ಬೆಳವಣಿಗೆಗೆ ಜವಾಬ್ದಾರಿ ವಹಿಸಿಕೊಳ್ಳಬೇಕು.

ಮಾತೃವಾತ್ಸಲ್ಯದಿಂದ ಕಾಣಬೇಕು. ಒಂದು ವಾರದ ನಂತರ ಮತ್ತೊಮ್ಮೆ ಭೇಟಿ ನೀಡಲಿದ್ದು, ವ್ಯವಸ್ಥೆ ಬದಲಾಗದಿದ್ದರೆ ಕ್ರಮ ಅನಿವಾರ್ಯ ಆಗಲಿದೆ ಎಂದು ಹೇಳಿದರು.

ಮಾಳಪ್ಪನಹಳ್ಳಿ ಮುರಾರ್ಜಿ ದೇಸಾಯಿ ಶಾಲೆಯಲ್ಲಿ ಸೂಕ್ತ ವ್ಯವಸ್ಥೆ ಇಲ್ಲ. ಶಿಕ್ಷಕರ ವಾಸ್ತವ್ಯಕ್ಕೆ ವಸತಿ ಗೃಹಗಳಿಲ್ಲ, ತರಗತಿಯಲ್ಲಿ ಮಕ್ಕಳು ನೆಲದ ಮೇಲೆ ಕುಳಿತು ಪಾಠ ಕೇಳಬೇಕು.

ಮಕ್ಕಳು ನೆಲದ ಮೇಲೆಯೇ ಮಲಗಬೇಕಿದ್ದು, ಹಾಸಿಗೆ, ಮಂಚ ಯಾವುದೇ ವ್ಯವಸ್ಥೆಯಿಲ್ಲ ಎಂದು ಶಿಕ್ಷಕರು-ವಿದ್ಯಾರ್ಥಿಗಳು ಸಮಸ್ಯೆಗಳನ್ನು ಶಾಸಕರ ಬಳಿ ಹೇಳಿಕೊಂಡರು.

ಮುಖ್ಯಶಿಕ್ಷಕಿ ಜ್ಯೋತಿ ಮಾತನಾಡಿ, ಶಾಲೆ ಅರಂಭವಾಗಿ 6 ವರ್ಷಗಳು ಕಳೆದಿವೆ, ಮಕ್ಕಳಿಗೆ ಹಾಗೂ ಶಿಕ್ಷಕರಿಗೆ ಮೂಲ ಸೌಲಭ್ಯಗಳ ಕೊರತೆಯಿದೆ.

ಇಲಾಖೆಯಲ್ಲಿ ಕೇಳಿದರೆ ಅನುದಾನವಿಲ್ಲ ಎನ್ನುತ್ತಾರೆ. ಮಕ್ಕಳ ಹಿತದೃಷ್ಟಿಯಿಂದ ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕು ಎಂದು ಮನವಿ ಮಾಡಿದರು.

ಶಾಸಕ ಗೋವಿಂದಪ್ಪ ಮಾತನಾಡಿ, ಬಿಸಿಎಂ ಇಲಾಖೆಯಲ್ಲಿ ಅನುದಾನ ಕಡಿಮೆಯಿರುವ ಕಾರಣಕ್ಕೆ ವಸತಿ ಶಾಲೆಯ ಮಕ್ಕಳಿಗೆ ಸೌಲಭ್ಯ ಸಿಕ್ಕಿಲ್ಲ. ಅಗತ್ಯ ಸೌಲಭ್ಯ ಒದಗಿಸಲಾಗುವುದು ಎಂದರು.

ಶಾಲೆಗಳ ತರಗತಿ ಕೊಠಡಿ, ವಸತಿಗೃಹ, ಭೋಜನಾಲಯ ಹಾಗೂ ಶೌಚಗೃಹಗಳ ಸ್ಥಿತಿಗತಿ ಪರಿಶೀಲಿಸಿದ ಶಾಸಕರು, ಸ್ವಚ್ಛತೆಗೆ ಆದ್ಯತೆ ನೀಡುವಂತೆ ಮುಖ್ಯಶಿಕ್ಷಕರಿಗೆ ತಾಕೀತು ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net