

ಹನುಮಸಾಗರ: ಉಜ್ವಲ ಭವಿಷ್ಯಕ್ಕಾಗಿ ಎಲ್ಲ ಪಾಲಕರೂ ಮಕ್ಕಳನ್ನು ತಪ್ಪದೇ ಶಾಲೆಗೆ ಕಳುಹಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಂದ್ರ ಕಾಂಬಳೆ ಹೇಳಿದರು.
ಸಮೀಪದ ಮಿಯ್ಯಪುರ ಸಹಿಪ್ರಾ ಶಾಲೆಯಲ್ಲಿ ಜಿಲ್ಲಾ ಆಡಳಿತ, ಶಿಕ್ಷಣ ಇಲಾಖೆ, ಕಲಿಕಾ ಟಾಟಾ ಟ್ರಸ್ಟ್ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಹಮ್ಮಿಕೊಂಡಿದ್ದ ಮಕ್ಕಳ ದಾಖಲಾತಿ ಹಾಗೂ ಹಾಜರಾತಿ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದರು.
ಗ್ರಾಮದ ಅರ್ಹ ವಯಸ್ಸಿನ ಎಲ್ಲ ಮಕ್ಕಳು ಶಾಲೆಗೆ ದಾಖಲಾಗಬೇಕು. ನಿತ್ಯ ತಪ್ಪದೇ ಶಾಲೆಗೆ ಬರಬೇಕು. ಮಗುವಿನ ಕಲಿಕಾ ಗುಣಮಟ್ಟ ಹೆಚ್ಚಲು ಪಾಲಕರು ಶ್ರಮ ವಹಿಸಬೇಕು. ಮಕ್ಕಳನ್ನು ನಿತ್ಯ ತಪ್ಪದೇ ಶಾಲೆಗೆ ಕಳುಹಿಸಿ, ಮನೆಯಲ್ಲಿ ಓದಲು ಬರೆಯಲು ಹಚ್ಚಬೇಕು. ಆರಂಭಿಕ ಹಂತದಲ್ಲಿ ಮಗುವಿಗೆ ಕಲಿಕೆಯಲ್ಲಿ ಆಸಕ್ತಿ ಬೆಳೆಯುವಂತೆ ಶಿಕ್ಷಕರು ಕ್ರಿಯಾತ್ಮಕವಾಗಿ ಬೋಧನೆ ಮಾಡಬೇಕು.
ಮಕ್ಕಳ ಕಲಿಕೆ ಹಾಗೂ ಆರೋಗ್ಯದ ಅನುಕೂಲಕ್ಕಾಗಿ ಸರ್ಕಾರ ಬಿಸಿಯೂಟ, ಹಾಲು, ಮೊಟ್ಟೆ, ಬಾಳೆಹಣ್ಣು, ಸಮವಸ್ತ್ರ, ಶೂ ನೀಡುತ್ತಿದ್ದು, ಸರ್ಕಾರಿ ಶಾಲೆಗೆ ನಿಮ್ಮ ಮಕ್ಕಳನ್ನು ಸೇರಿಸಿ ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಕಲಿಕಾ ಟಾಟಾ ಟ್ರಸ್ಟ್ ಕೊಪ್ಪಳದ ವ್ಯವಸ್ಥಾಪಕ ಶಿವಕುಮಾರ ಯಾದವ ಮಾತನಾಡಿ, ಒಂದು ಪ್ರಗತಿಶೀಲ ಸಮಾಜ ನಿರ್ಮಾಣ ಪ್ರಕ್ರಿಯೆಗೆ ಶಿಕ್ಷಣದ ಮೂಲಭೂತ ಸಾಧನ. ಎಲ್ಲ ಮಕ್ಕಳು ಶಿಕ್ಷಣ ಪಡೆದು ಉತ್ತಮ ಪ್ರಜೆಗಳಾಗಬೇಕು ಎಂದರು.
ಡೊಳ್ಳು ಕುಣಿತ, ಮಕ್ಕಳಿಂದ ನೃತ್ಯ ಮಾಡುವ ಮೂಲಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ದಾಖಲಾತಿ ಆಂದೋಲನ ನಡೆಸಲಾಯಿತು. ಸಿಆರ್‌ಪಿ ಅಯ್ಯಪ್ಪ ಸುರುಳ, ಪಿಡಿಒ ಶಿವಪುತ್ರಪ್ಪ ಬರಿದೇಲಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಶೋಭಾ, ಗ್ರಾಪಂ ಅಧ್ಯಕ್ಷ ಶರಣಪ್ಪ ಮದ್ಲೂರ, ಗ್ರಾಪಂ ಸದಸ್ಯರಾದ ಗವಿಸಿದ್ದಪ್ಪ ಕುದುರಿ, ಶರಣೆಗೌಡ ಮ್ಯಾಗೇರಿ, ಮುಖ್ಯಶಿಕ್ಷಕ ಖಾಜಾಹುಸೇನ ಒಂಟೆಳಿ, ಕಲಿಕಾ ಟಾಟಾ ಟ್ರಸ್ಟ್‌ನ ರಾಜಕುಮಾರ ಕುಂಬಾರ, ಬಸವರಾಜ ಹಾದಿಮನಿ, ಗೋವಿಂದಗೌಡ ವಾಸನದ, ವಿರೂಪಾಕ್ಷಪ್ಪ ಬನಹಟ್ಟಿ, ಯಲ್ಲಪ್ಪ ಗೋದಿ, ಗವಿಸಿದ್ದಪ್ಪ ಬೇವೂರು, ಶಿಕ್ಷಕರಾದ ಇತರರಿದ್ದರು.