

ಮಂಡ್ಯ: ಪ್ರಸ್ತುತ ದಿನಗಳಲ್ಲಿ ತಂತ್ರಜ್ಞಾನ-ವಿಜ್ಞಾನದಲ್ಲಿ ನಾಗಲೋಟದಲ್ಲಿ ಬೆಳೆಯುತ್ತಿದೆ ಎಂದು ನಿವೃತ್ತ ಐಎಎಸ್ ಅಧಿಕಾರಿ ಟಿ.ತಿಮ್ಮೇಗೌಡ ಮಂಗಲ ಹೇಳಿದರು.
ನಗರದ ಕರ್ನಾಟಕ ಸಂಘದ ಕೆವಿಎಸ್ ಭವನದಲ್ಲಿ ಕನ್ನಿಕಾ ಶಿಲ್ಪ ನವೋದಯ ಎಜುಕೇಷನ್ ಟ್ರಸ್ಟ್, ಕನ್ನಿಕಾ ಶಿಲ್ಪ ನವೋದಯ ತರಬೇತಿ ಕೇಂದ್ರ ಗಾಂಧಿನಗರ ಮತ್ತು ಮಂಗಲ ಟಿ.ತಿಮ್ಮೇಗೌಡ ಐಎಎಸ್ ಪ್ರತಿಷ್ಠಾನದಿಂದ ಆಯೋಜಿಸಿದ್ದ ಶಿಕ್ಷಕರ ಹಾಗೂ ಇಂಜಿನಿಯರ್ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ದಿನೇ ದಿನೇ ಕೃತಕ ಬುದ್ಧಿಮತ್ತೆಯ ತಂತ್ರಜ್ಞಾನಗಳು ಎಲ್ಲ ಕಡೆ ಅಳವಡಿಕೆಯಾಗುತ್ತಿದೆ. ಶಿಕ್ಷಣ ಮತ್ತು ನೀರಾವರಿ ಕ್ಷೇತ್ರದಲ್ಲಿಯೂ ಅತ್ಯಾಧುನಿಕ ತಂತ್ರಜ್ಞಾನ ಬಳಕೆಯಾಗುತ್ತಿದೆ. ಮಂಡ್ಯ ಜಿಲ್ಲೆ ಯಾವುದರಲ್ಲೂ ಕಡಿಮೆ ಇಲ್ಲ. ಒಂದು ಕಾಲದಲ್ಲಿ ಮಂಡ್ಯ ಎಂದರೆ ಇಂಡಿಯಾ ಎಂದು ಹೇಳುತ್ತಿದ್ದರು, ಬಹುದೊಡ್ಡ ರಾಜಕಾರಣಿಗಳು ಇದ್ದ ನೆಲ. ಜತೆಗೆ ಮಹಾನ್ ಮೇದಾವಿಗಳಿಂದ ಸಂಪತ್ಬರಿತ ಜಿಲ್ಲೆಯಾಗಿದೆ. ಕಲೆ, ಸಂಸ್ಕೃತಿ, ಶಿಕ್ಷಣ, ರಾಜಕೀಯ, ಜನಪದ, ಸಂಭಾವಿತ ವ್ಯಕ್ತಿತ್ವದಲ್ಲಿ ಉನ್ನತ ಸ್ಥಾನದಲ್ಲಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಗ್ರಾಮೀಣ ವಿದ್ಯಾರ್ಥಿಗಳು ಐಎಎಸ್, ಐಪಿಎಸ್, ಕೆಎಎಸ್‌ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಪಾಸ್ ಮಾಡಿ ದೊಡ್ಡ ಹುದ್ದೆ ಅಲಂಕರಿಸಲೆಂದು ಕೃಷಿಕ ಸರ್ವೋದಯ ೌಂಡೇಷನ್ ಸ್ಥಾಪಿಸಿ ತರಬೇತಿ ನೀಡಲಾಗುತ್ತಿದೆ. ಎಚ್.ಆರ್.ಕನ್ನಿಕಾ ಅವರು ಮಕ್ಕಳಿಗೆ ನವೋದಯ ಶಿಕ್ಷಣ ಪಡೆಯುವುದಕ್ಕೆ ತರಬೇತಿ ನೀಡುತ್ತಾ ಲಕ್ಷಾಂತರ ಗ್ರಾಮೀಣ ಮಕ್ಕಳು ರಾಷ್ಟ್ರಮಟ್ಟದ ಶಿಕ್ಷಣ ಸಂಸ್ಥೆಗಳಲ್ಲಿ ಕಲಿಯುವಂತೆ ಮಾಡಿದ್ದಾರೆ. ಇದು ದೊಡ್ಡ ಸಾಧನೆ. ಇಂತಹವರಿಗೆ ಪ್ರೋತ್ಸಾಹ ನೀಡಿ ಮತ್ತಷ್ಟು ಉನ್ನತಮಟ್ಟಕ್ಕೆ ಬೆಳೆಯಲಿ ಎಂದು ನುಡಿದರು.
ವಿಶ್ರಾಂತ ಪ್ರಾಧ್ಯಾಪಕ ಬಿ.ಎಸ್.ಬೋರೇಗೌಡ, ಮಂಡ್ಯ ವಿವಿ ಉಪಕುಲಸಚಿವ ಡಾ.ಎಂ.ವೈ.ಶಿವರಾಮು, ಕನ್ನಿಕಾ ಶಿಲ್ಪ ನವೋದಯ ತರಬೇತಿ ಕೇಂದ್ರದ ಮುಖ್ಯಸ್ಥೆ ಎಚ್.ಆರ್.ಕನ್ನಿಕಾ, ಶಿಕ್ಷಕ ಕೆ.ಎಸ್.ಮಧುಸೂಧನ್, ಇಂಜಿನಿಯರ್ ಎಚ್.ಎಂ.ಮಹದೇವಪ್ಪ, ಕೆ.ಕಿಶೋರ್‌ಕುಮಾರ್, ಎಚ್.ಬಿ.ರಾಮಕೃಷ್ಣ, ಶಿವಣ್ಣ ಮಂಗಲ, ಉಪನ್ಯಾಸಕ ರಾಮಾರಾಧ್ಯ ಇತರರಿದ್ದರು.