

ಮಡಿಕೇರಿ
ಅಂತಾರಾಷ್ಟೀಯ ಶಿಕ್ಷಕರ ದಿನಾಚರಣೆ ಅಂಗವಾಗಿ ಕರ್ನಾಟಕ ರಾಜ್ಯ ಅನುದಾನಿತ, ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ನೌಕರರ ಸಂಘದಿAದ ಬೆಂಗಳೂರಿನ ಸರ್ಕಾರಿ ಕಲಾ ಕಾಲೇಜಿನಲ್ಲಿ ಭಾನುವಾರ (ಅ.26) ನಡೆಯಲಿರುವ ರಾಜ್ಯದ ಉತ್ತಮ ಶಿಕ್ಷಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬಾಳೆಲೆ ವಿಜಯಲಕ್ಷ್ಮಿ ಪ್ರೌಢ ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಪಡಿಞರಂಡ ಪ್ರಭು ಕುಮಾರ್ ರಾಜ್ಯಮಟ್ಟದ ಪ್ರಶಸ್ತಿ ಸ್ವೀಕರಿಸಲಿದ್ದಾರೆ.
ಹಾಕಿ, ಬ್ಯಾಸ್ಕೆಟ್ ಬಾಲ್, ವಾಲಿಬಾಲ್ ಕ್ರೀಡೆಗಳಲ್ಲಿ ಕಳೆದ ಇಪ್ಪತ್ತು ವರ್ಷಗಳಲ್ಲಿ ಇವರಿಂದ ತರಬೇತಿ ಪಡೆದ ಬಾಲಕ, ಬಾಲಕಿಯರು ರಾಜ್ಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿದ್ದಲ್ಲದೆ ಇವರಿಂದ ಪ್ರಾಥಮಿಕ ಹಂತದ ತರಬೇತಿ ಪಡೆದ ಹಾಕಿ ಆಟಗಾರರುಗಳಾದ ಸಣ್ಣುವಂಡ ಉತ್ತಪ್ಪ ಮತ್ತು ವಿ.ಅರ್. ರಘುನಾಥ್ ಒಲಿಂಪಿಕ್ಸ್ ನಲ್ಲೂ ಭಾಗವಹಿಸಿರುವುದನ್ನು ಪರಿಗಣಿಸುವ ಮೂಲಕ ರಾಜ್ಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಗೊಣಿಕೊಪ್ಪಲು ಕಾಪ್ಸ್ ಶಾಲೆಯ ಚಿತ್ರ ಕಲಾ ಶಿಕ್ಷಕ ಸಂಗನ ಗೌಡ ಪಾಟೀಲ್ ಕೂಡ ರಾಜ್ಯ ಪ್ರಶಸ್ತಿಗೆ ಆಯ್ಕೆ ಆಗಿದ್ದಾರೆ. ಕಳೆದ 30 ವರ್ಷಗಳ ವೃತ್ತಿ ಜೀವನದಲ್ಲಿ ಇವರಿಂದ ಚಿತ್ರ ಕಲಾ ತರಬೇತಿ ಪಡೆದ ವಿದ್ಯಾರ್ಥಿಗಳು ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ ಪಡೆದುಕೊಂಡಿರುತ್ತಾರೆ.
ಇವರ ಗರಡಿಯಲ್ಲಿ ಬೆಳೆದ ಬಾಗಲಕೋಟೆ ಜಿಲ್ಲೆಯ ಲಿಂಗಪ್ಪ ಅಂಗಡಿ, ಬೆಂಗಳೂರಿನ ಪ್ರಜ್ವಲ್ ರಾಷ್ಟ್ರೀಯ ಮಟ್ಟದ ಚಿತ್ರಕಲಾ ಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ ಹಾಗಾಗಿ ಇವರನ್ನು ಪ್ರಶಸ್ತಿಗೆ ಪರಿಗಣಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.