ಶಿಸ್ತು ಶಿಕ್ಷೆ ಆಗದಂತೆ ಕಲಿಸಿ: ರಾಜಗುರು ದ್ವಾರಕನಾಥ್‌ರಿಂದ ಶಿಕ್ಷಕರಿಗೆ ಕಿವಿಮಾತು

vijaya college
Published on

ಬೆಂಗಳೂರು: ವಿದ್ಯಾರ್ಥಿಗಳಿಗೆ ಶಿಸ್ತು ಮುಖ್ಯವಾಗಿದ್ದರೂ, ಶಿಸ್ತು ಶಿಕ್ಷೆ ಆಗದಂತೆ ಕಲಿಸುವ ವಿಧಾನವನ್ನು ಶಿಕ್ಷಕರು ಮೈಗೂಡಿಸಿಕೊಳ್ಳಬೇಕು ಎಂದು ರಾಜಗುರು ಬಿ.ಎಸ್.ದ್ವಾರಕನಾಥ್ ಅವರು ಬೋಧಕ ವರ್ಗಕ್ಕೆ ಸಲಹೆ ನೀಡಿದ್ದಾರೆ.

ಜಯನಗರದ ವಿಜಯಾ ಪ್ರೌಢಶಾಲೆಯಲ್ಲಿ ಗುರುವಾರ ಆಯೋಜಿಸಿದ್ದ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಕೆ.ಚಂದ್ರಶೇಖರ್ ಅವರ ಪುತ್ಥಳಿ ಅನಾವರಣಗೊಳಿಸಿ ಮಾತನಾಡಿದರು.

ಪ್ರಸ್ತುತ ವಿದ್ಯಾರ್ಥಿಗಳಿಗೆ ಉತ್ತಮ ರೀತಿಯಲ್ಲಿ ಶಿಕ್ಷಣ ಕಲಿಸಲು ವಿದ್ಯಾ ಸಂಸ್ಥೆಗಳು ಮುಂದಾಗಬೇಕು. ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಶಾಲೆಯನ್ನು ಎತ್ತರಕ್ಕೆ ಏರಿಸುವ ಕೆಲಸ ಮಾಡಬೇಕು. ಈ ವೇಳೆ ವಿದ್ಯಾರ್ಥಿಗಳಿಗೆ ಶಿಕ್ಷೆ ನೀಡದೆಯೇ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಕ್ಷರ ಕಲಿಸುವುದರಿಂದ ಮಕ್ಕಳು ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಲು ಸಾಧ್ಯವಾಗುತ್ತದೆ ಎಂದು ಪ್ರತಿಪಾದಿಸಿದರು.

ಸಂಪತ್ತಿಗೆ ಲಕ್ಷ್ಮೀ ಇರುವಂತೆ ವಿದ್ಯೆಗೆ ಸರಸ್ವತಿ ಅಧಿದೇವತೆ. ಇದನ್ನು ಅರ್ಥೈಸಿಕೊಂಡು ಶಿಕ್ಷಕಿಯರು ಮಾತಾ ಸ್ವರೂಪದಲ್ಲಿ ವಿದ್ಯಾರ್ಥಿಗಳಿಗೆ ವಿದ್ಯೆಯನ್ನು ಕಲಿಸಬೇಕು. ಮಕ್ಕಳಲ್ಲಿ ಶಿಸ್ತು ಬೆಳೆಸುವ ಜತೆಗೆ ಆತ್ಮವಿಶ್ವಾಸ ಬೆಳೆಸುವತ್ತ ಗಮನ ಹರಿಸಬೇಕು. 21ನೇ ಶತಮಾನದಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡುವುದರಿಂದ ಶಿಕ್ಷಣ ಸಂಸ್ಥೆಯನ್ನು ಉನ್ನತ ಸ್ಥಾನಕ್ಕೆ ಏರಿಸಲು ಸಾಧ್ಯ ಎಂದು ತಿಳಿಸಿದರು.

ವಿದ್ಯಾ ತಪಸ್ವಿ:

ಹಾಸನ ಜಿಲ್ಲೆಯ ಕೆರೆಗೋಡಿನವರಾದ ಕೆ.ಚಂದ್ರಶೇಖರ್ ತಮ್ಮ ಆಸ್ತಿಯನ್ನು ಸಹೋದರರಿಗೆ ಬಿಟ್ಟುಕೊಟ್ಟು ಬೆಂಗಳೂರಿಗೆ ಆಗಮಿಸಿ ವಿಜಯಾ ಹೈಸ್ಕೂಲ್ ಸ್ಥಾಪಿಸಿದರು. ಇವರಿಗೆ ಹಿರಿಯ ಸಹೋದರಿ ನಾಗಲಕ್ಷ್ಮಿ ಶಂಕರನಾರಾಯಣ, ಬೆಳ್ಳೂರು ಸತ್ಯನಾರಾಯಣ ಬೆಂಬಲವಾಗಿ ನಿಂತರು. ಅಣತಿಯ ಜೋಡಿದಾರ್ ರಾಮಸ್ವಾಮಿ ಕೂಡ ಸಹಕಾರ ನೀಡಿದ ಕಾರಣ ವಿಜಯಾ ಶಾಲೆ ಸ್ಥಾಪಿಸಿ ರಾಜಧಾನಿಯಲ್ಲಿ ಮುಂಚೂಣಿ ಶಿಕ್ಷಣ ಸಂಸ್ಥೆಯನ್ನಾಗಿ ಮಾಡಲಾಯಿತು. ಇಂತಹ ವಿದ್ಯಾ ತಪಸ್ವಿ ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವವರಿಗೆ ಮಾರ್ಗದರ್ಶಿಯಾಗಿದ್ದಾರೆ ಎಂದು ರಾಜಗುರು ಸ್ಮರಿಸಿದರು.

ಪ್ರಸ್ತುತ ವಿಜಯಾ ಶಿಕ್ಷಣ ಸಂಸ್ಥೆಯಲ್ಲಿ ಒಟ್ಟು 2,750 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. 160ಕ್ಕೂ ಹೆಚ್ಚು ಬೋಧಕ ವರ್ಗ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಟೊಂಕ ಕಟ್ಟಿದ್ದು, ಪಠ್ಯೇತರ ಚಟುವಿಟಕೆಗೂ ಹೆಚ್ಚಿನ ಆದ್ಯತೆ ನೀಡಿರುವುದು ಶ್ಲಾಘನೀಯ ಎಂದು ರಾಜಗುರು ದ್ವಾರಕನಾಥ್ ತಿಳಿಸಿದರು.

ಕಾರ್ಯಕ್ರಮದಲ್ಲಿ ಅದಮ್ಯ ಚೇತನ ಸಂಸ್ಥೆಯ ತೇಜಸ್ವಿನಿ ಅನಂತಕುಮಾರ್, ವಿಜಯಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ರಘುನಂದನ್, ವಿಜಯಾ ಪ್ರೌಢಶಾಲೆಯ ಪ್ರಾಂಶುಪಾಲೆ ಅಂಜುಮಾನ್ ರಿಯಾಜ್, ಪದವಿ ಕಾಲೇಜಿನ ಪ್ರಾಂಶುಪಾಲ ಶಂಕರಾಚಾರ್ಯ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net