

ರಾವಂದೂರು: ಶಿಕ್ಷಕರು ಮತ್ತು ಮಕ್ಕಳಲ್ಲಿ ಜ್ಞಾನಾರ್ಜನೆ ಹೆಚ್ಚಿಸಲು ಕಲಿಕಾ ಹಬ್ಬವು ಒಂದು ಸೂಕ್ತ ವೇದಿಕೆ ಆಗಿದೆ ಎಂದು ನಿವೃತ್ತ ಉಪನ್ಯಾಸಕ ಆರ್.ಎಸ್.ದೊಡ್ಡಣ್ಣ ತಿಳಿಸಿದರು.
ಪಿರಿಯಾಪಟ್ಟಣ ತಾಲೂಕು ರಾವಂದೂರು ಕರ್ನಾಟಕ ಪಬ್ಲಿಕ್ ಶಾಲೆ ಹಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಗುರುವಾರ ಆಯೋಜಿಸಿದ್ದ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಮಕ್ಕಳಲ್ಲಿ ವಿಭಿನ್ನ ಪ್ರತಿಭೆಗಳು ಅಡಗಿರುತ್ತವೆ. ಅವನ್ನು ಹೊರ ತೆಗೆಯಲು ಸೂಕ್ತ ಅವಕಾಶ ಇದಾಗಿದ್ದು, ಗ್ರಾಮೀಣ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಸರ್ಕಾರವು ಹೊಸ ಹೊಸ ಯೋಜನೆಗಳನ್ನು ರೂಪಿಸಿದ್ದು ಇದಕ್ಕೆ ಅನುಗುಣವಾಗಿ ಮಕ್ಕಳ ಕಲಿಕೆಗೆ ಪೂರಕ ವಾತಾವರಣ ಕಲ್ಪಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಶಿಕ್ಷಕರು ಮಕ್ಕಳಿಗೆ ಅವರ ಕಲಿಕಾ ಮಟ್ಟಕ್ಕೆ ಅನುಗುಣವಾಗಿ ಬೋಧನೆ ಮಾಡುವುದರ ಜತೆಗೆ ವಿದ್ಯಾರ್ಥಿಗಳು ಚೈತನ್ಯಮುಖವಾಗಲು ಕಲಿಯುವಂತೆ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ತಿಳಿಸಿದರು.
ಕೆಳಗನಹಳ್ಳಿ ಸರ್ಕಾರಿ ಶಾಲೆ ಮುಖ್ಯಶಿಕ್ಷಕ ಪ್ರೇಮ್‌ಕುಮಾರ್ ಮಾತನಾಡಿ, ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಶೈಕ್ಷಣಿಕವಾಗಿ ಹಾಗೂ ಮುಖ್ಯವಾಹಿನಿಗೆ ತರುವುದೇ ಮೂಲ ಉದ್ದೇಶವಾಗಿದ್ದರಿಂದ ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬಲು ಈ ಕಲಿಕಾ ಹಬ್ಬ ಉತ್ತಮ ವೇದಿಕೆಯಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕ್ಲಸ್ಟರ್ ಮಟ್ಟದ ಎಲ್ಲ ಶಾಲೆಯ ವಿಶೇಷ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು ಸ್ಪರ್ಧೆಯ ವಿಜೇತರಿಗೆ ಬಹುಮಾನ ಮತ್ತು ಪ್ರಮಾಣ ಪತ್ರವನ್ನು ವಿತರಿಸಲಾಯಿತು. ಶಿಕ್ಷಣ ಸಂಯೋಜಕ ಗಣೇಶ್, ಸಿಆರ್‌ಪಿ ಸೋಮಶೇಖರ್, ಮುಖ್ಯಶಿಕ್ಷಕರಾದ ಲಿಲ್ಲಿಮೇರಿ, ರಾಜು, ರಾಜ್ಯ ಸರ್ಕಾರಿ ನೌಕರ ಸಂಘದ ನಿರ್ದೇಶಕ ರಾಜೇಶ್, ಎಸ್‌ಡಿಎಂಸಿ ಸದಸ್ಯ ಹುಚ್ಚೇಗೌಡ ಸೇರಿದಂತೆ ಮತ್ತಿತರರು ಹಾಜರಿದ್ದರು.