

ಮಸ್ಕಿ: ಅಳಿವಿನಂಚಿಲ್ಲಿರುವ ಜಾನಪದ ಕಲೆಯನ್ನು ವಿದ್ಯಾರ್ಥಿಗಳಿಗೆ ಕಲಿಸುವುದು ಅವಶ್ಯಕವಾಗಿದೆ ಎಂದು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ ಹೇಳಿದರು.
ಪಟ್ಟಣದ ಗಚ್ಚಿನ ಹಿರೇಮಠದಲ್ಲಿ ಶನಿವಾರ ‘ನಿನ್ನೊಳಗ ನೀನು ತಿಳಿದು ನೋಡಣ್ಣ’ ಎನ್ನುವ ಶೀರ್ಷಿಕೆ ಅಡಿಯಲ್ಲಿ ಹಮ್ಮಿಕೊಂಡಿದ್ದ ಮಸ್ಕಿ ತಾಲೂಕು ಜಾನಪದ ಸಂಭ್ರಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅಕಾಡೆಮಿಯಿಂದ ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲಿ ಜಾನಪದ ಸಂಭ್ರಮ ಕಾರ್ಯಕ್ರಮ ಆಯೋಜಿಸುವ ಮೂಲಕ ಜಾನಪದ ಕಲೆ, ಸಂಸ್ಕೃತಿ ಉಳಿಸುವ ಕೆಲಸ ನಡೆದಿದೆ. ಗ್ರಾಮೀಣ ಭಾಗದ ಜನರಿಂದಾಗಿ ಜಾನಪದ ಕಲೆ ಜೀವಂತವಾಗಿವೆ. ಇದನ್ನು ಶಾಲಾ- ಕಾಲೇಜುಗಳಲ್ಲಿ ಪಠ್ಯವಾಗಿಸಿ ಬೋಧಿಸುವ ಕೆಲಸ ನಡೆಯಬೇಕಾಗಿದೆ ಎಂದರು.
ಪುರಸಭೆ ಅಧ್ಯಕ್ಷ ಮಲ್ಲಯ್ಯ ಅಂಬಾಡಿ ಮಾತನಾಡಿ, ವಿದ್ಯಾರ್ಥಿಗಳು ಮೊಬೈಲ್ ಗೀಳಿನಿಂದ ಹೊರಬರಬೇಕು. ಜಾನಪದ ಕಲೆ, ಸಾಹಿತ್ಯ, ಸಂಗೀತದ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಅಕಾಡೆಮಿ, ಜಾನಪದ ತಜ್ಞರು ಚಿಂತನೆ ನಡೆಸಬೇಕು ಎಂದರು.
ಗಚ್ಚಿನ ಹಿರೇಮಠದ ವರರುದ್ರಮುನಿ ಶಿವಾಚಾರ್ಯರು, ಸಾಹಿತಿ ಸಿ.ದಾನಪ್ಪ, ಉಪನ್ಯಾಸಕ ಮಹಾಂತೇಶ ಮಸ್ಕಿ, ಅಕಾಡೆಮಿ ಸದಸ್ಯ ರಂಗಪ್ಪ ಮಾಸ್ತಾರ್ ತಡಕಲ್ ಮಾತನಾಡಿದರು. ಅಪರಾಧ ವಿಭಾಗದ ಪಿಎಸ್‌ಐ ಭೀಮದಾಸ ಇದ್ದರು.
ನಂಜಲದಿನ್ನಿ, ವಲ್ಕಂದಿನ್ನಿ, ಮರಕಮದಿನ್ನಿ, ಹಸಮಕಲ್ ಕಲಾ ತಂಡಗಳು ಭಾಗವಹಿಸಿದ್ದವು. ಜಾನಪದ ಗಾಯನ, ತತ್ವಪದ, ಭಜನೆ ಪದ, ಸೋಬಾನೆ ಪದ, ಬುರ‌್ರಕಥಾ ಹಾಡುಗಾರಿಕೆ ಮೂಲಕ ಜನರನ್ನು ರಂಜಿಸಲಾಯಿತು.