

ಚಾಮರಾಝನಗರ : ವ್ಯಾಪಾರಕ್ಕಾಗಿ ರಾಜ್ಯಕ್ಕೆ ಬರುವ ಹೊರ ರಾಜ್ಯಗಳ ವ್ಯಾಪಾರಿಗಳನ್ನು ಕನ್ನಡಿಗರು ಮಾತೃ ಭಾಷೆಯಲ್ಲೇ ಮಾತನಾಡಿಸುವ ಮೂಲಕ ಅವರಿಗೂ ಕನ್ನಡ ಕಲಿಸಬೇಕು ಎಂದು ಶಾಸಕ ಎಚ್.ಎಂ. ಗಣೇಶ್ ಪ್ರಸಾದ್ ಅಭಿಪ್ರಾಯಪಟ್ಟರು.
ಕನ್ನಡ ರಕ್ಷಣಾ ವೇದಿಕೆಯಿಂದ ಗುಂಡ್ಲುಪೇಟೆ ಪಟ್ಟಣದ ಪ್ರವಾಸಿ ಮಂದಿರ ವೃತ್ತದಲ್ಲಿ ಶನಿವಾರ ಹಮ್ಮಿಕೊಂಡಿದ್ದ 68ನೇ ಕನ್ನಡ ರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಚಾಮರಾಜನಗರ ಜಿಲ್ಲೆ ಮೂರು ರಾಜ್ಯಗಳಿಗೆ ಗಡಿ ಹೊಂದಿದೆ. ಹಾಗಾಗಿ, ಹೊರ ರಾಜ್ಯದವರು ವ್ಯಾಪಾರ ವಹಿವಾಟಿಗೆ ಕರ್ನಾಟಕಕ್ಕೆ ಬರುತ್ತಾರೆ. ಇಂತಹ ಸಂದರ್ಭಗಳಲ್ಲಿ ವ್ಯಾಪಾರಿಗಳ ಜತೆ ಕನ್ನಡದಲ್ಲೇ ವ್ಯವಹರಿಸುವ ಮೂಲಕ ಕನ್ನಡದ ಕಂಪನ್ನು ಇನ್ನಷ್ಟು ಪಸರಿಸಬೇಕು. ಅವರಿಗೂ ಕನ್ನಡ ಕಲಿಸುವ ಮೂಲಕ ನಾವು ಕನ್ನಡವನ್ನು ಉಳಿಸಿ ಬೆಳೆಸಬೇಕು ಎಂದು ಸಲಹೆ ನೀಡಿದರು.
ಕನ್ನಡ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ಸುರೇಶ್ ನಾಯಕ್, ಜಿಲ್ಲಾ ಉಪಾಧ್ಯಕ್ಷ ರಾಜೇಂದ್ರ, ಪ್ರಧಾನ ಕಾರ್ಯದರ್ಶಿ ನಾಗರಾಜು, ಸಂಘಟನೆ ಕಾರ್ಯದರ್ಶಿ ಜಗದೀಶ್, ಬೇಗೂರು ಹೋಬಳಿ ಅಧ್ಯಕ್ಷ ಜವರಶಟ್ಟಿ, ಹಂಗಳ ಹೋಬಳಿ ಅಧ್ಯಕ್ಷ ಚನ್ನನಾಯಕ, ಸಹ ಕಾರ್ಯದರ್ಶಿ ನಟರಾಜ್ ಗೌಡ ಸೇರಿದಂತೆ ಹಲವರು ಇದ್ದರು.