ಶಿಕ್ಷಣದಲ್ಲಿ ಮಾನವೀಯ ಮೌಲ್ಯ ಕಲಿಸಿ, ಚಿತ್ರದುರ್ಗದ ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿ ಸಲಹೆ, ನೆಲಮಂಗಲದಲ್ಲಿ ದಿವ್ಯಜ್ಯೋತಿ ಪಿಯು ಕಾಲೇಜು ಕಟ್ಟಡ ಉದ್ಘಾಟನೆ

14 Nela Ph 09 College Udgatane
Published on

ನೆಲಮಂಗಲ: ಗ್ರಾಮೀಣ ವಿದ್ಯಾರ್ಥಿಗಳಿಗೆ ಉನ್ನತ ಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ವಿದ್ಯಾಸಂಸ್ಥೆ ಪ್ರಾರಂಭಿಸಿರುವುದು ಸಂತಸದ ಸಂಗತಿ ಎಂದು ಚಿತ್ರದುರ್ಗದ ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿ ತಿಳಿಸಿದರು.

ನಗರದ ಚಿಕ್ಕಣ್ಣ ಬಡಾವಣೆಯಲ್ಲಿ ಶುಕ್ರವಾರ ದಿವ್ಯಜ್ಯೋತಿ ಪದವಿ ಪೂರ್ವ ಕಾಲೇಜು ಕಟ್ಟಡ ಉದ್ಘಾಟಿಸಿ ಮಾತನಾಡಿದರು.

ಆಧುನಿಕ ವ್ಯವಸ್ಥೆಯಲ್ಲಿ ಬದಲಾವಣೆ ಅತಿ ವೇಗದಲ್ಲಿ ಸಾಗುತ್ತಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳನ್ನು ಪುಸ್ತಕಕ್ಕೆ ಸೀಮಿತವಾಗಿಸಬಾರದು. ಪಠ್ಯೇತರ ಚಟುವಟಿಕೆಗಳ ಬಗ್ಗೆ ಆಸಕ್ತಿ ಬೆಳೆಸುವ ಜತೆಗೆ ಮಾನವೀಯ ಮೌಲ್ಯ ಕಲಿಸಬೇಕು. ಕಾಲೇಜು ನಾಡಿಗೆ ಮಾದರಿಯಾಗುವಂತಹ ವಿದ್ಯಾ ಸಂಸ್ಥೆಯಾಗಿ ರೂಪುಗೊಳ್ಳಲಿ ಎಂದು ಆಶಿಸಿದರು.

ಸಂಸ್ಥೆ ಸಂಸ್ಥಾಪಕ ಎಲ್. ಕೃಷ್ಣಮೂರ್ತಿ ಮಾತನಾಡಿ, ಗ್ರಾಮೀಣ ವಿದ್ಯಾರ್ಥಿಗಳಿಗೆ ಅನುಕೂಲವಾಗಲು ದಿವ್ಯಜ್ಯೋತಿ ವಿದ್ಯಾಸಂಸ್ಥೆ ಪ್ರಾರಂಭ ಮಾಡಲಾಗಿದೆ. ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡಿದ ಹಲವು ವಿದ್ಯಾರ್ಥಿಗಳು ಉನ್ನತ ಸ್ಥಾನದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಡಿಮೆ ಪ್ರವೇಶ ಶುಲ್ಕದಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಹಾಗೂ ಉತ್ತಮ ಸೌಲಭ್ಯ ಒದಗಿಸುವುದೇ ಸಂಸ್ಥೆಯ ಗುರಿಯಾಗಿದೆ ಎಂದರು.

ಗಣ್ಯರಿಂದ ಹಾರೈಕೆ : ಮಾಜಿ ಸಂಸದರಾದ ಕೆ.ಎಚ್.ಮುನಿಯಪ್ಪ, ಬಿ.ಎನ್.ಚಂದ್ರಪ್ಪ, ವಿಧಾನ ಪರಿಷತ್ ಸದಸ್ಯ ಬಿ.ಎಂ.ಎಲ್.ಕಾಂತರಾಜು, ಹರ್ಷ ವಿದ್ಯಾಸಂಸ್ಥೆ ಸಂಸ್ಥಾಪಕ ಶಿವಕುಮಾರ್, ನಿವೃತ್ತ ಐಎಎಸ್ ಅಧಿಕಾರಿ ಬಾಬುರಾವ್, ತಾಲೂಕು ಜೆಡಿಎಸ್ ಅಧ್ಯಕ್ಷ ಎನ್.ಪಿ.ಹೇಮಂತ್‌ಕುಮಾರ್, ಟಿಎಪಿಸಿಎಂಎಸ್ ನಿರ್ದೇಶಕ ಪಿಳ್ಳಪ್ಪ, ಎಪಿಎಂಸಿ ನಿರ್ದೇಶಕ ಗೋವಿಂದರಾಜು, ಬಿಎಂಟಿಸಿ ಮಾಜಿ ನಿರ್ದೇಶಕ ಮಿಲ್ಟ್ರೀಮೂರ್ತಿ, ರೈತಹಿತರಕ್ಷಣಾ ಸಮಿತಿ ಅಧ್ಯಕ್ಷ ನಾಗರಾಜು, ಮುಖಂಡ ಬೂದಿಹಾಲ್‌ಕಿಟ್ಟಿ, ವೆಂಕಟೇಶ್‌ಬಾಬು, ಮಹೇಶ್ ಕಾರ್ಯಕ್ರಮಕ್ಕೆ ಕಾಲೇಜಿಗೆ ಆಗಮಿಸಿ ಶುಭಹಾರೈಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net