

ಗಜೇಂದ್ರಗಡ: ಕಾಲೇಜು ವಿದ್ಯಾರ್ಥಿಗಳಲ್ಲಿ ಬುದ್ಧಿಶಕ್ತಿಗೆ ಕೊರತೆಯಿಲ್ಲ. ಆದರೆ, ಸಂಸ್ಕಾರ ಹಾಗೂ ಗುಣಾತ್ಮಕ ಶಿಕ್ಷಣದ ಕೊರತೆಯಿದೆ. ಮಕ್ಕಳಿಗೆ ಕಲಿಕೆಯ ಹಂತದಲ್ಲೇ ಉತ್ತಮ ಸಂಸ್ಕಾರ ಕಲಿಸಬೇಕು ಎಂದು ಹಾಲಕೆರೆ ಅನ್ನದಾನೇಶ್ವರ ಸಂಸ್ಥಾನ ಮಠದ ಶ್ರೀ ಮುಪ್ಪಿನ ಬಸವಲಿಂಗ ಮಹಾಸ್ವಾಮೀಜಿ ನುಡಿದರು.
ಪಟ್ಟಣದ ಪುರ್ತಗೇರಿ ಕ್ರಾಸ್ ಬಳಿ ಇರುವ ಶ್ರೀ ಅನ್ನದಾನೇಶ್ವರ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಪ್ರಸಕ್ತ ಸಾಲಿನ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಹಾಗೂ ವಿವಿಧ ಸಾಂಘಿಕ ಚಟುವಟಿಕೆಯ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಮನುಷ್ಯ ಎಷ್ಟೇ ಎತ್ತರಕ್ಕೆ ಬೆಳೆದರೂ ಅವನಲ್ಲಿ ಸಂಸ್ಕಾರವಿಲ್ಲದಿದ್ದರೆ ಆ ವ್ಯಕ್ತಿ ಸಮಾಜದ ಕಟ್ಟಕಡೆಯ ವ್ಯಕ್ತಿಯಾಗಿರುತ್ತಾನೆ. ಅದಕ್ಕಾಗಿ ಅಕ್ಷರದ ಜತೆಗೆ ಮಾನವೀಯ ಮೌಲ್ಯಗಳನ್ನು ಒಳಗೊಂಡ ವಿದ್ಯಾರ್ಥಿಯು ಸಮಾಜಕ್ಕೆ ಬೇಕಾಗಿದ್ದಾನೆ ಎಂದರು.
ಮಠದ ಸಂಸ್ಥೆಗಳಲ್ಲಿ ಕಲಿಯುವ ಮಕ್ಕಳು ಉತ್ತಮ ಫಲಿತಾಂಶವನ್ನು ದಾಖಲಿಸುವ ಮೂಲಕ ಮಠಕ್ಕೆ ಸಾಧನೆಯ ಕಾಣಿಕೆ ನೀಡಬೇಕು. ಬದುಕಿನ ಸಾವಿರಾರು ಕನಸುಗಳಿಗೆ ಬೆಳಕು ಸಿಗುತ್ತದೆ ಎಂದು ಹಾಲಕೆರೆ ಮಠದ ಕಾಲೇಜುಗಳಿಗೆ ಪಾಲಕರು ತಮ್ಮ ಮಕ್ಕಳನ್ನು ಕಳುಹಿಸುತ್ತಾರೆ. ಆದ್ದರಿಂದ ವಿದ್ಯಾರ್ಥಿಗಳು ಇಲ್ಲಿನ ಉಪನ್ಯಾಸಕರ ಮಾರ್ಗದರ್ಶನ ಪಡೆದು ಜೀವನದ ಗುರಿ ಸಾಧಿಸಲು ಮುಂದಾಗಬೇಕು ಎಂದರು.
ಆಕಾಶವಾಣಿ ಕಲಾವಿದರಾದ ಚಂದ್ರಶೇಖರ ಎಂ. ವಡಿಗೇರಿ ಉಪನ್ಯಾಸ ನೀಡಿ, ಮಕ್ಕಳ ಮನಸು ಬಿಳಿಹಾಳೆ ಇದ್ದಂತೆ. ಅದರಲ್ಲಿ ಉಪನ್ಯಾಸಕರು ಏನು ಕಲಿಸುತ್ತಾರೋ ಅದೇ ಮೂಡುತ್ತದೆ, ಕಲಿಸುವ ಮೊದಲು ಯೋಚನೆ ಮಾಡಿ, ಉತ್ತಮ ತಯಾರಿ ನಡೆಸಿ ಬೋಧನೆ ಮಾಡಬೇಕು. ಮಕ್ಕಳಿಗೆ ಪಾಠದ ಜತೆಗೆ ಸಂಸ್ಕಾರ ನೀಡಿರಿ ಎಂದು ಸಲಹೆ ನೀಡಿದರು.
ಕಳೆದ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ದೂರದರ್ಶನ ಕಲಾವಿದ ರಾಮಕೃಷ್ಣ ಪೂಜಾರ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.