ಯುವಜನತೆಗೆ ಗಾಂಧೀಜಿ ಚಿಂತನೆ ತಿಳಿಸಿ: ಶಾಸಕ ಜಿ.ಟಿ.ದೇವೇಗೌಡ

5
Published on

ಮೈಸೂರು: ಗಾಂಧೀಜಿಯವರ ಬದುಕು ಮತ್ತು ಬರಹ ಇಂದಿಗೂ ಪ್ರಸ್ತುತ. ಹೀಗಾಗಿ ಯುವಜನತೆಗೆ ಗಾಂಧೀಜಿ ನಡೆದು ಬಂದ ಹಾದಿಯ ಬಗ್ಗೆ, ಅವರ ಆದರ್ಶ, ಚಿಂತನೆಗಳನ್ನು ತಿಳಿಸಬೇಕಿದೆ ಎಂದು ಶಾಸಕ ಜಿ.ಟಿ.ದೇವೇಗೌಡ ಹೇಳಿದರು.
ಶ್ರೀ ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜಿನಿಂದ ಬುಧವಾರ ನಟರಾಜ ಸಭಾದಲ್ಲಿ ಆಯೋಜಿಸಿದ್ದ 21ನೇ ಶತಮಾನದಲ್ಲಿ ಗಾಂಧೀಜಿ ರಾಜಕೀಯ ನಿಲುವುಗಳ ಪ್ರಸ್ತುತತೆ ಚಿಂತನ-ಮಂಥನ ದುಂಡುಮೇಜಿನ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ದೇಶ ಉದ್ಧಾರವಾಗಬೇಕಾದರೆ ಗ್ರಾಮಗಳು ಉದ್ಧಾರವಾಗಬೇಕು ಎಂದು ಅವರು ಕನಸು ಕಂಡಿದ್ದರು. ಸಮಾನತೆ, ಶಿಕ್ಷಣ, ಸತ್ಯದ ಮಾರ್ಗದ ಸಂದೇಶ ನೀಡಿದ್ದ ಗಾಂಧೀಜಿ ಸಂದೇಶಗಳು ಎಂದೆಂದಿಗೂ ಉಳಿಯಬೇಕು. ಅವರ ವಿಚಾರಧಾರೆ, ಆದರ್ಶನ ಸದಾಕಾಲಕ್ಕೂ ಪ್ರಸ್ತುತವಾಗಿದ್ದು, ಇಂದಿನ ಯುವ ಜನತೆ ಅವುಗಳನ್ನು ಪಾಲಿಸಬೇಕು ಎಂದರು.
ಪ್ರಾಂತೀಯ ಭಾಷೆ, ರಾಷ್ಟ್ರಭಾಷೆ, ಗ್ರಾಮೋದ್ಯೋಗ, ಗ್ರಾಮ ನೈರ್ಮಲ್ಯ, ಸ್ತ್ರೀ ಶಿಕ್ಷಣ, ಜಾತಿ ಪದ್ಧತಿ ನಿಮೂರ್ಲನೆ ಮೊದಲಾದವುಗಳ ಬಗ್ಗೆ ಜನ ಸಾಮಾನ್ಯರಿಗೆ ಜಾಗೃತಿ ಮೂಡಿಸುವುದು ಗಾಂಧೀಜಿಯವರ ನಿಲುವಾಗಿತ್ತು. ಅದನ್ನು ಎಲ್ಲರೂ ರಾಜಕೀಯ,ಪಕ್ಷಬೇಧ ಮರೆತು ಸಾಕಾರಗೊಳಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.
ಕೃಷ್ಣರಾಜ ಕ್ಷೇತ್ರದ ಶಾಸಕ ಟಿ.ಎಸ್.ಶ್ರೀವತ್ಸ ಮಾತನಾಡಿ, ಗಾಂಧೀಜಿ ಸ್ವಾತಂತ್ರ್ಯ ತಂದುಕೊಡಲು ಅಹಿಂಸಾ ಮಾರ್ಗವನ್ನು ಅನುಸರಿಸಿದರು. ಸ್ವದೇಶಿ ಚಿಂತನೆಗೆ ಹೆಚ್ಚು ಒತ್ತು ಕೊಟ್ಟವರು. ಮಹಿಳೆ ಮಧ್ಯರಾತ್ರಿ ಸ್ವತಂತ್ರವಾಗಿ ಓಡಾಡಬೇಕು ಎಂದು ಆಶಿಸಿದ್ದವರು. ಆದರೆ ಇವತ್ತು ನಾಲ್ಕು ಗೋಡೆಗಳ ನಡುವೆಯೇ ಇರುವ ಮಹಿಳೆಗೆ ರಕ್ಷಣೆ ಇಲ್ಲದಾಗಿದೆ ಎಂದು ವಿಷಾದಿಸಿದರು.
ಗುಂಡ್ಲುಪೇಟೆ ಶಾಸಕ ಎಚ್.ಎಂ. ಗಣೇಶಪ್ರಸಾದ್ ಮಾತನಾಡಿ, ಜಾತಿ ಪ್ರೇರಣೆಗೆ ಒಳಗಾಗಿ ಇಂದು ಮಹನೀಯರ ದಿನಾಚರಣೆಗಳೇ ಕಳೆಗುಂದಿದೆ. ಜನಸೇವೆಯೇ ಇಂದಿನ ರಾಜಕಾರಣಿಗಳ ಮುಖ್ಯ ಕರ್ತವ್ಯವಾಗಬೇಕು. ಕೇವಲ ಅಂರ್ತರ್ಜಾಲದ ಮಾಹಿತಿಗೆ ಒಳಗಾಗದೆ ಪುಸ್ತಕಗಳ ಅಧ್ಯಯನದಿಂದ ಮಾತ್ರ ಮಹನೀಯರ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಸಾಧ್ಯ ಎಂದು ತಿಳಿಸಿದರು.
ಬೆಂಗಳೂರು ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷ ಡಾ. ವೂಡೇ ಪಿ. ಕೃಷ್ಣ ಅವರು ಗಾಂಧೀಜಿಯವರ ರಾಜಕೀಯ ನಿಲುವುಗಳು ಪ್ರಸ್ತುತತೆ ಕುರಿತು ಮಾತನಾಡಿ, ಪ್ರಪಂಚ ಕಂಡ ಅತ್ಯದ್ಭುತ ಮಾನವತಾವಾದಿ ಗಾಂಧೀಜಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ಕೊಟ್ಟಿದ್ದರು. ದೇಶದ ಸ್ವಾತಂತ್ರೃದಿಂದ ಹಿಡಿದು ಸಾಮರಸ್ಯ, ಶಾಂತಿ ಸೇರಿದಂತೆ ಅಪಾರ ಕೊಡುಗೆಗಳನ್ನು ಕೊಟ್ಟರು. ಗಾಂಧೀಜಿ ಸೇವೆ ಮತ್ತು ತ್ಯಾಗದ ಪ್ರತೀಕವಾಗಿದ್ದರು ಎಂದು ತಿಳಿಸಿದರು.
ಪ್ರಸ್ತುತ ಜಾತೀಯತೆ, ಮತೀಯ ಗಲಭೆ ಎಲ್ಲೆಲ್ಲೂ ತಾಂಡವವಾಡುತ್ತಿದೆ. ತಾಂತ್ರಿಕತೆಯ ಆದ್ಯತೆಯಿಂದ ಸಂಬಂಧಗಳು ಹಾಳಾಗುತ್ತಿವೆ. ಪ್ರಕೃತಿಯೊಂದಿಗಿನ ಸಂಬಂಧ ಕಳೆದು ಹೋಗುತ್ತಿದೆ. ಇಂದು ಶ್ರೀಮಂತಿಕೆ ಹಾಗೂ ಅಧಿಕಾರಕ್ಕೆ ಬೆಲೆಯೇ ಹೊರತು ಮೌಲ್ಯಗಳಿಗಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ಗಾಂಧಿ ಪುತ್ಥಳಿಗೆ ಪುಷ್ಪಾರ್ಚನೆ ಮಾಡಿದ ಹಿರಿಯ ಸ್ವಾತಂತ್ರ್ಯಯೋಧ ವೈ.ಸಿ. ರೇವಣ್ಣ ಮಾತನಾಡಿ, ಗಾಂಧೀ ತತ್ವದಂತೆ ನಮ್ಮ ದೇಶ ನಡೆಯುತ್ತಿಲ್ಲ. ಗಾಂಧೀಜಿ ತಂದುಕೊಟ್ಟ ಸ್ವರಾಜ್ಯವನ್ನು ನಾವು ಉಳಿಸಿ, ಬೆಳೆಸಿಕೊಂಡು ಹೋಗಬೇಕು ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net