ಕಾಲೇಜಿನಲ್ಲಿ ಜಾನಪದ ಕಲೆ ಕಲಿಸಿ

mysore
Published on

ಮೈಸೂರು: ಓದಿನ ಒತ್ತಡದಲ್ಲಿ ಸಿಲುಕಿರುವ ಕಾಲೇಜಿನ ವಿದ್ಯಾರ್ಥಿಗಳಿಗೆ ಜಾನಪದ ಕಲೆಯನ್ನು ಕಲಿಸಬೇಕು ಎಂದು ಜಾನಪದ ವಿದ್ವಾಂಸ ಕೃಷ್ಣಮೂರ್ತಿ ಹನೂರು ಸಲಹೆ ನೀಡಿದರು.


ಗೌತಮ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸೇವಾ ಟ್ರಸ್ಟ್ ವತಿಯಿಂದ ಕಿರು ರಂಗಮಂದಿರದಲ್ಲಿ ಶನಿವಾರ ಸಂಜೆ ಆಯೋಜಿಸಿದ್ದ ರಂಗಭೂಮಿ ಮತ್ತು ಜಾನಪದ ಕಲಾ ಪ್ರಕಾರಗಳ ಉಚಿತ ತರಬೇತಿ ಶಿಬಿರದ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದರು.


ಕಾಲೇಜಿನ ವಿದ್ಯಾರ್ಥಿಗಳಿಗೆ ಮೂರು ತಿಂಗಳಿಗೊಮ್ಮೆ ಸೆಮಿಸ್ಟರ್ ಪರೀಕ್ಷೆ ಬರೆಯುವುದು, ಅದಕ್ಕಾಗಿ ಓದುವುದು ಕರ್ಮ ಎನಿಸಿದೆ. ಇದು ಬಲು ಕಷ್ಟಕರ. ಈ ಜಂಜಾಟದಲ್ಲೇ ಅವರು ಶೈಕ್ಷಣಿಕ ಜೀವನವನ್ನೇ ಕಳೆದುಬಿಡುತ್ತಾರೆ. ಪಠ್ಯಕ್ರಮದ ಓದಿನ ಮಧ್ಯೆ ನಿರಾಳತೆ ತಂದುಕೊಡಬೇಕಿದೆ. ಅದಕ್ಕಾಗಿ ಕಾಲೇಜು ಹಂತದಲ್ಲಿ ಜಾನಪದ ಕಲೆಯನ್ನು ಪರಿಚಯಿಸಬೇಕು. ಈ ಮೂಲಕವಾದರೂ ಅವರಿಗೆ ಬಿಡುಗಡೆ ಭಾಗ್ಯ ಕಲ್ಪಿಸಿಕೊಡಬೇಕು. ಇದರಿಂದ ಅವರ ಆರೋಗ್ಯ, ಮನಸ್ಸು ಸಹ ಸರಿಹೋಗಬಹುದು ಎಂದು ಹೇಳಿದರು.


ಜಾನಪದ ಎಲ್ಲ ಕಲೆಗಳ ಮೂಲ ಬೇರು. ಸಾವಿರಾರು ವರ್ಷ ಬದುಕಿ ಬಂದಿರುವ ಈ ಕಲೆ ಇದೀಗ ಏದುಸಿರು ಬಿಡುತ್ತಿದೆ. ಇದು ಎಲ್ಲ ಕಾಲದಲ್ಲೂ ಇತ್ತು. ಜಾನಪದ ಕುರಿತು ಇರುವ ತಾತ್ಸಾರ ಭಾವವೇ ಇದಕ್ಕೆ ಕಾರಣ. ತಾರತಮ್ಯ ಭಾವವೂ ಆಳವಾಗಿ ಬೇರೂರಿದೆ. ಬೇರೆ ದೇಶಗಳಲ್ಲಿ ಈ ರೀತಿಯಿಲ್ಲ. ಆದರೆ, ಭಾರತದಲ್ಲಿ ಮಾತ್ರ ಈ ರೀತಿ ತಿರಸ್ಕಾರ ಭಾವ ಬೆಳೆದು ಬಂದಿದೆ ಎಂದು ಕಳವಳ ವ್ಯಕ್ತಪಡಿಸಿದರು.


ರಾಜ್ಯದಲ್ಲಿ 150 ಜಾನಪದ ಕಲೆ ಪ್ರಕಾರಗಳಿವೆ. 4ರಿಂದ 5 ಸಾವಿರ ಪುಸ್ತಕಗಳು ಪ್ರಕಟವಾಗಿವೆ. ಜಾನಪದ ಮೇಲೆಯೇ ಗ್ರಾಮೀಣ ಜನರ ಬದುಕು ನಿಂತಿದೆ. ಈ ಕಲೆ ಜೀವಂತವಾಗಿರುವುದೇ ಇವರಿಂದ. ರಾಜ, ಮಹಾರಾಜರಿಂದ ಅಲ್ಲ. ಈಗಾಗಲೇ ಗ್ರಾಮೀಣ ಭಾಗ ನಿರ್ಲಕ್ಷೃಕ್ಕೆ ಒಳಗಾಗಿದೆ. ಇನ್ನೂ ರಾಜರ ಕಾಲದಲ್ಲಿ ಪರಿಸ್ಥಿತಿ ಹೇಗೆ ಇತ್ತೋ ತಿಳಿಯದಾಗಿದೆ. ಓದು ಬರಹ ತಿಳಿಯದ ಹಳ್ಳಿ ಜನರು ಈ ಕಲೆಯನ್ನು ಉಳಿಸಿ ಬೆಳೆಸಿಕೊಂಡು ಬಂದಿದ್ದಾರೆ. ಇದಕ್ಕೆ ಪ್ರೋತ್ಸಾಹ ದೊರೆಯಬೇಕು ಎಂದರು.


ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನಸ್ವಾಮಿ, ರಂಗವಲ್ಲಿ ಟ್ರಸ್ಟ್‌ನ ಸಂಚಾಲಕ ರವಿ ಹುಣಸೂರು, ಟ್ರಸ್ಟ್‌ನ ಅಧ್ಯಕ್ಷ ಕೃಷ್ಣಮೂರ್ತಿ ತಲಕಾಡು ಇದ್ದರು. ಬಳಿಕ ಶಿಬಿರಾರ್ಥಿಗಳು ಚೆನ್ನ ಕುಣಿತ, ದಕ್ಷಿಣ ಕನ್ನಡದ ತುಳು ಜಾನಪದ ನೃತ್ಯ, ಕಂಸಾಳೆ, ವೀರಗಾಸೆ, ಡೊಳ್ಳು ಕುಣಿತ, ಪೂಜಾ ಕುಣಿತ, ಪಟ ಕುಣಿತ, ಹಾಲಕ್ಕಿ ನೃತ್ಯವನ್ನು ಪ್ರದರ್ಶಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net