ಕೌಟುಂಬಿಕ ಮೌಲ್ಯಗಳನ್ನು ಮಕ್ಕಳಿಗೆ ತಿಳಿಸಿ

BIRUR swamiji
ಬೀರೂರಿನ ಅಶೋಕನಗರ ಅಂಚೇರ್ ಬೀದಿಯಲ್ಲಿ ಶ್ರೀ ದುರ್ಗಾ ಪರಮೇಶ್ವರಿ ದೇವಾಲಯದ ಕಳಶಾರೋಹಣವನ್ನು ಹರಿಹರಪುರ ಮಠದ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ನೆರವೇರಿಸಿದರು. ಎನ್.ದೇವರಾಜ್, ಶಾಂತಾ, ಬಿ.ಕೆ.ಶಶಿಧರ್, ಎನ್.ಎಂ.ನಾಗರಾಜ್ ಇತರರಿದ್ದರು.
Published on

ಬೀರೂರು: ಮಕ್ಕಳು ಪಾಲಕರ ಸೇವೆಯನ್ನು ನಿಷ್ಕಲ್ಮಷ ಮನಸ್ಸಿನಿಂದ ಮಾಡಿದರೆ ಮಾತ್ರ ಭಗವಂತನ ಅನುಗ್ರಹವಾಗುತ್ತದೆ. ಪಾಲಕರು ಮಕ್ಕಳಿಗೆ ಕೌಟುಂಬಿಕ ಮೌಲ್ಯಗಳ ಅರಿವನ್ನು ಬಾಲ್ಯದಲ್ಲೇ ತಿಳಿಸಿಕೊಡಬೇಕು ಎಂದು ಹರಿಹರಪುರ ಮಠದ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.

ಪಟ್ಟಣದ ಅಶೋಕನಗರದ ಅಂಚೇರ್ ಬೀದಿಯಲ್ಲಿ ಗುರುವಾರ ಶ್ರೀ ದುರ್ಗಾಪರಮೇಶ್ವರಿ ದೇವಾಲಯದ ಕಲಶ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಯಾವುದೇ ಜಾತಿ, ಧರ್ಮ, ಬಡತನ, ಶ್ರೀಮಂತಿಕೆ ಹಾಗೂ ಅಧಿಕಾರಕ್ಕೆ ಭಗವಂತನ ಅನುಗ್ರಹ ಸಿಗುವುದಿಲ್ಲ. ನಿಷ್ಕಲ್ಮಷ ಭಕ್ತಿ, ಅಚಲ ನಂಬಿಕೆ, ನಿಸ್ವಾರ್ಥ, ವಿಶ್ವಾಸದಿಂದ ದೇವರನ್ನು ಕಾಣಬಹುದು. ಮನಸ್ಸಿನಲ್ಲಿ ಭಕ್ತಿಯೇ ಇಲ್ಲದೆ ತೀರ್ಥಯಾತ್ರೆ ಮಾಡಿದರೆ ಕಿಂಚಿತ್ತೂ ಉಪಯೋಗವಾಗದು. ಅಂತರಂಗದಲ್ಲಿ ಶುದ್ಧ ಭಕ್ತಿ ಇದ್ದಲ್ಲಿ ಮಾತ್ರ ಭಕ್ತನಿದ್ದಲ್ಲಿಗೇ ಭಗವಂತ ಅನುಗ್ರಹಿಸುತ್ತಾನೆ. ಭಕ್ತಿ ಎನ್ನುವುದು ಮಾನವ ಮತ್ತು ದೇವರ ನಡುವಿನ ಸಂಬಂಧ ಸೂತ್ರವಿದ್ದಂತೆ. ಆಧ್ಯಾತ್ಮಿಕ ತಳಹದಿ ಮೇಲೆ ನಮ್ಮ ಒಳಗಿನ ಶ್ರೀಮಂತಿಕೆಯನ್ನು ಬೆಳೆಸಿಕೊಂಡು ತಂದೆ, ತಾಯಿ, ಗುಹಿರಿಯರನ್ನು ಗೌರವಿಸುವ ಮತ್ತು ಪ್ರೀತಿಸುವ ಸಂಸ್ಕಾರಯುತ ಸಮಾಜ ನಿರ್ಮಾಣವಾಗಲಿ ಎಂದು ಆಶಿಸಿದರು.
ಬೀರೂರು ಎನ್.ದೇವರಾಜ್ ಮಾತನಾಡಿದರು. ಮಲ್ಲಿಗೆ ಸುಧೀರ್ ಬಳಗದಿಂದ ಸುಗಮ ಸಂಗೀತ ಏರ್ಪಡಿಸಲಾಗಿತ್ತು. ಪಂಡರಿ ವಂಶಸ್ಥರು ಭರತನಾಟ್ಯ ಪ್ರದರ್ಶಿಸಿದರು. ಪುರಸಭೆ ಸದಸ್ಯರಾದ ಬಿ.ಕೆ.ಶಶಿಧರ್, ಎನ್.ಎಂ.ನಾಗರಾಜ್, ಬಿ.ಆರ್.ರವಿಕುಮಾರ್, ಅರೇಕಲ್ ಪ್ರಕಾಶ್, ದೇವಸ್ಥಾನ ಸಮಿತಿ ಪದಾಧಿಕಾರಿಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸ್ಥಳೀಯರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net