

ಪಾಂಡವಪುರ: ಸಮಾಜ ಮೋಸ, ವಂಚನೆ, ಅನ್ಯಾಯದ ಕೃತ್ಯಗಳಲ್ಲಿ ಮುಳುಗಿ ಹೋಗಿರುವ ಪ್ರಸ್ತುತ ಸನ್ನಿವೇಶದಲ್ಲಿ ಮಕ್ಕಳಿಗೆ ಪ್ರಾಮಾಣಿಕತೆಯಿಂದ ಬದುಕುವುದನ್ನು ಕಲಿಸಬೇಕಾದ ಅನಿವಾರ್ಯತೆ ಇದೆ ಎಂದು ನಿವೃತ್ತ ಪ್ರಾಂಶುಪಾಲ ರಾಜು ಅಭಿಪ್ರಾಯಪಟ್ಟರು.
ತಾಲೂಕಿನ ಲಕ್ಷ್ಮೀಸಾಗರ ಪ್ರೌಢಶಾಲಾ ಆವರಣದಲ್ಲಿ ಪಾಂಡವಪುರ ಪಟ್ಟಣದ ಸರ್ಕಾರಿ ಪ್ರೌಢಶಾಲೆಯ 1995-96ನೇ ಸಾಲಿನ ಎಸ್.ಎಸ್.ಎಲ್.ಸಿ ಹಿರಿಯ ವಿದ್ಯಾರ್ಥಿಗಳು ಇತ್ತೀಚೆಗೆ ಆಯೋಜಿಸಿದ್ದ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಮುಂದಿನ ಪೀಳಿಗೆಯ ಮಕ್ಕಳಿಗೆ ಪ್ರಾಮಾಣಿಕ ಹಾಗೂ ಮಾನವೀಯ ನೆಲೆಗಟ್ಟಿನಲ್ಲಿ ಬದುಕು ನಡೆಸುವ ಗುಣಗಳನ್ನು ಹೇಳಿಕೊಡಬೇಕಿದೆ ಎಂದರು.
ಮನುಷ್ಯ ಮನುಷ್ಯರನ್ನು ಗೌರವಿಸುವುದನ್ನು ಮಕ್ಕಳಿಗೆ ಕಲಿಸಬೇಕು. ಪ್ರಸ್ತುತ ಅವಿಭಕ್ತ ಕುಟುಂಬಗಳು ಕಡಿಮೆಯಾಗಿ ಮಕ್ಕಳಲ್ಲಿ ಸಂಬಂಧ, ಬಾಂಧವ್ಯ ಕಡಿಮೆಯಾಗುತ್ತಿದೆ. ಪಾಲಕರು ಅವಿಭಕ್ತ ಕುಟುಂಬ ಮತ್ತು ಸಂಬಂಧಗಳ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಬೇಕು ಎಂದು ಸಲಹೆ ನೀಡಿದರು.
ಸಮಾಜದಲ್ಲಿ ಶಿಕ್ಷಕ ವೃತ್ತಿ ಶ್ರೇಷ್ಠವಾಗಿದೆ. ಒಬ್ಬ ಶಿಕ್ಷಕ ಶಾಲೆಯ ಮಕ್ಕಳ ಜತೆ ಕಳೆಯುವ ಕಾಲ ಶ್ರೇಷ್ಠ ಅನುಭವವಾಗಿದೆ. ಅದು ಬೇರೆ ಯಾರಿಗೂ ಸಿಗುವುದಿಲ್ಲ. ಹಿರಿಯ ವಿದ್ಯಾರ್ಥಿಗಳು ಹಮ್ಮಿಕೊಂಡಿರುವ ಸ್ನೇಹ ಸಮ್ಮಿಲನ ಕಾರ್ಯಕ್ರಮದ ಮೂಲಕ ನಾವು ಮತ್ತೆ ನಮ್ಮ ಎಲ್ಲ ಸಹೋದ್ಯೋಗಿಗಳನ್ನು ಭೇಟಿ ಮಾಡಿ ಮಾತನಾಡಲು ಅನುಕೂಲವಾಯಿತು ಎಂದರು.
ಇದೇ ವೇಳೆ ಲಕ್ಷ್ಮೀಸಾಗರ ಶಾಲೆಯ ಎಲ್ಲ ಶಿಕ್ಷಕರನ್ನು ಸನ್ಮಾನಿಸಲಾಯಿತು. ನಿವೃತ್ತ ಶಿಕ್ಷಕರಾದ ಸಣ್ಣಮರೀಗೌಡ, ಸಣ್ಣಬೋರೇಗೌಡ, ಚಿಕ್ಕಪುಟ್ಟೇಗೌಡ, ನಿಂಗೇಗೌಡ, ಬಿ.ಎಲ್.ಲಿಂಗರಾಜು, ಶ್ರೀನಿವಾಸ್, ಆರ್.ಚಂದ್ರಪ್ರಭಾ, ಟಿ.ಎನ್.ಸುಮಿತ್ರಾದೇವಿ, ವೆಂಕಟೇಶ್, ಹಿರಿಯ ವಿದ್ಯಾರ್ಥಿಗಳಾದ ಆರ್.ಶಂಕರ್, ವಿ.ಸತ್ಯ, ಸುಬ್ರಮಣ್ಯ (ಸುಬ್ಬು), ತುಕರಾಮ್, ದಿವಾಕರ, ಮಲ್ಲಿಕಾರ್ಜುನ, ಮಂಜುನಾಥ್ (ಭಾಸ್ಕರ್), ಸರಿತಾ, ವಿನೋದಾ, ಲೀಲಾವತಿ, ರೇಖಾ, ದಿವ್ಯಶ್ರೀ ಇತರರು ಇದ್ದರು.