

ಶಿವಮೊಗ್ಗ: ವಿದ್ಯಾರ್ಥಿಗಳಿಗೆ ಮೊದಲು ಸೋಲುವುದನ್ನು ಮತ್ತು ಸೋಲನ್ನು ಎದುರಿಸುವುದನ್ನು ಕಲಿಸಬೇಕು. ಆಗ ಛಲ ಮೂಡುತ್ತದೆ. ಸೋಲುಗಳನ್ನು ಎದುರಿಸುವುದರಿಂದ ಅವರಲ್ಲಿ ಆತ್ಮವಿಶ್ವಾಸ ಮೂಡುತ್ತದೆ. ಭವಿಷ್ಯದಲ್ಲಿ ಸಾಧನೆಯತ್ತ ಹೆಜ್ಜೆ ಹಾಕುತ್ತಾರೆ ಎಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗೋಪಾಲ್ ಯಡಗೆರೆ ಹೇಳಿದರು.
ಕ್ರಿಯೇಟಿವ್ ಗ್ರೂಪ್ಸ್ ಏರ್ಪಡಿಸಿದ್ದ ಮುದ್ದು ಕೃಷ್ಣ -ಮುದ್ದು ರಾಧೆ ವಿನೂತನ ವೇಷಭೂಷಣ ಸ್ಪರ್ಧೆಯಲ್ಲಿ ಬಹುಮಾನ ವಿತರಿಸಿ ಮಾತನಾಡುತ್ತಿದ ಅವರು, ಮಕ್ಕಳಿಗೆ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವಂತಹ ಹತ್ತು ಹಲವು ಅವಕಾಶಗಳು ಬರುತ್ತದೆ. ಯಾವ ಸಂದರ್ಭವನ್ನೂ ಕೈಚೆಲ್ಲದೇ ಪಾಲ್ಗೊಳ್ಳುವಂತೆ ಪ್ರೇರೇಪಿಸಬೇಕೆಂದರು.
ಸೋಲು ಗೆಲುವು ಮುಖ್ಯವಾಗಬಾರದು. ಆದರೆ ಪ್ರತಿ ಸ್ಪರ್ಧೆಯಲ್ಲೂ ಸೋಲು ಅಥವಾ ಗೆಲುವಿನ ಪಾಠ ಕಲಿಯುತ್ತಾರೆ. ಸೋಲುಗಳು ಗೆಲುವಿನ ಸೋಪಾನವಾಗುತ್ತದೆ. ಈ ರೀತಿಯ ಪೌರಾಣಿಕ ಪಾತ್ರಗಳ ವೇಷಭೂಷಣಗಳನ್ನು ಹಾಕುವ ಮೂಲಕ ಪಾಲಕರು ಮತ್ತು ವಿದ್ಯಾರ್ಥಿಗಳು ಆ ಪಾತ್ರಗಳನ್ನು ಅರಿಯುವ ಯತ್ನ ಮಾಡುತ್ತಾರೆ. ಇದು ಅವರ ಜ್ಞಾನವನ್ನು ಹೆಚ್ಚಿಸುತ್ತದೆ ಎಂದರು.
ಕ್ರಿಯೇಟಿವ್ ಗ್ರೂಪ್‌ನ ಸಂಸ್ಥಾಪಕ ಎಲ್. ಕೆ. ಪರಮೇಶ್ ಮಾತನಾಡಿ, ಮಕ್ಕಳಲ್ಲಿನ ಪ್ರತಿಯೊಬ್ಬ ಮಗುವಿನ ಪ್ರತಿಭೆ ಹೊರತರಬೇಕು ಮತ್ತು ಎಲ್ಲ ಮಕ್ಕಳಿಗೆ ಅವಕಾಶ ಕೊಡಬೇಕೆಂಬ ಕಾರಣದಿಂದ ಇಂತಹ ಕಾರ್ಯಕ್ರಮ ಆಯೋಜಿಸಿದ್ದೇವೆ. ಮುಂದಿನ ದಿನಗಳಲ್ಲಿ ಕೆಲವು ಸರ್ಕಾರಿ ಶಾಲೆಗಳಿಗೆ ಹೋಗಿ ಅಲ್ಲಿಯೇ ಇಂತಹ ಸ್ಪರ್ಧೆ ಆಯೋಜಿಸುವ ಮೂಲಕ ಅವರಿಗೆ ಅವಕಾಶ ದೊರಕಿಸುವ ಯತ್ನ ಮಾಡಲಾಗುವುದು ಎಂದು ಹೇಳಿದರು.
ತೀರ್ಪುಗಾರರಾಗಿದ್ದ ಮಹೇಂದ್ರ ಗೋರೆ, ಉಮಾ ದಿಲೀಪ್, ಶ್ವೇತಾ ಪ್ರಕಾಶ್ ಮತ್ತು ಸ್ವರ್ಣ. ಸ್ಪರ್ಧೆಯಲ್ಲಿ ಸುಮಾರು 200 ಮಕ್ಕಳು ಪಾಲ್ಗೊಂಡಿದ್ದರು.