

ಮೈಸೂರು: ಮೌಢ್ಯದಿಂದ ಹೊರಬಂದು ಡಾ.ಅಂಬೇಡ್ಕರ್ ಅವರು ತೋರಿಸಿ ಕೊಟ್ಟಿರುವ ಸತ್ಯದ ಮಾರ್ಗದಲ್ಲಿ ನಡೆಯಲು ಏಕೆ ಹಿಂಜರಿಯುತ್ತೀರಾ? ಅವರು ಸಂವಿಧಾನದಲ್ಲಿ ಕಲ್ಪಿಸಿಕೊಟ್ಟಿರುವ ಮೀಸಲಾತಿ ಬೇಕು. ಆದರೆ, ಅವರು ತೋರಿಸಿದ ಧಮ್ಮದ ಮಾರ್ಗ ಬೇಡವೇ ಎಂದು ಗಾಂಧಿನಗರದ ಉರಿಲಿಂಗಿ ಪೆದ್ದಿ ಮಠದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ ಪ್ರಶ್ನಿಸಿದರು.
ಕರ್ನಾಟಕ ಬುದ್ಧ ಧಮ್ಮ ಸಮಿತಿ ವತಿಯಿಂದ ವಿಜಯನಗರ 1ನೇ ಹಂತದ ಡಿ.ಸಂಜೀವಯ್ಯ ಸ್ಮಾರಕ ಶಿಕ್ಷಣ ಸಂಸ್ಥೆಯ ಆವರಣದಲ್ಲಿರುವ ಬುದ್ಧ ವಿಹಾರದಲ್ಲಿ ಸೋಮವಾರ ಆಯೋಜಿಸಿದ್ದ ಅಂಬೇಡ್ಕರ್ ಅವರ ಬೌದ್ಧಧರ್ಮ ದೀಕ್ಷಾ ದಿನಾಚರಣೆ ಮತ್ತು ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಂಬೇಡ್ಕರ್ ಅವರ ಋಣದಲ್ಲಿ ಬದುಕುತ್ತಿರುವವರು ಸಮಾಜದತ್ತ ಕಿಂಚಿತ್ತೂ ತಲೆಕೆಡಿಸಿಕೊಳ್ಳದಿರುವುದು ಬೇಸರದ ಸಂಗತಿ. ಅವಕಾಶವಾದಿಗಳು ಮತ್ತು ಸಮಯ ಸಾಧಕರಿಂದ ಈ ಸಮಾಜಕ್ಕೆ ಹೆಚ್ಚು ಹೊಡೆತ ಬಿದ್ದಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಜಾತಿ ವ್ಯವಸ್ಥೆ ಇಂದು ತನ್ನ ಸ್ವರೂಪವನ್ನು ಬದಲಾಯಿಸಿಕೊಳ್ಳುತ್ತಿದ್ದು ಮನುಷ್ಯ ಮನುಷ್ಯರನ್ನು ಪ್ರೀತಿಸುವ ಬದಲು ಜಾತಿಯಿಂದಲೇ ಎಲ್ಲವನ್ನು ಅಳೆಯಲಾಗುತ್ತಿದೆ. ಪ್ರಾಣಿ-ಪಕ್ಷಿಗಳಿಗೆ ಜಾತಿ ಇರುತ್ತದೆ. ಪ್ರಾಣಿಗಳ ಹೆಜ್ಜೆ ಗುರುತು ಬೇರೆಬೇರೆ ಇರುತ್ತವೆ. ಇದರಿಂದ ಇಂತಹ ಪ್ರಾಣಿಯ ಹೆಜ್ಜೆ ಗುರುತು ಎಂದು ಹೇಳಬಹುದು. ಆದರೆ, ಮನುಷ್ಯರ ಹೆಜ್ಜೆ ಗುರುತುಗಳು ಒಂದೇ ಅಲ್ಲವೇ? ಇದರಲ್ಲಿ ಹೇಗೆ ಜಾತಿ ಹುಡುಕುತ್ತಿರಾ? ನಮ್ಮೊಳಗಿನ ಅಜ್ಞಾನದಿಂದ ಜಾತಿಯ ಬೇರು ಇನ್ನೂ ಬೇರೂರಿದೆ ಎಂಬ ವೈಜ್ಞಾನಿಕ ಸತ್ಯವನ್ನು ಜಗತ್ತಿಗೆ ಸಾದರಪಡಿಸಿದ ಮಹಾನ್ ಜ್ಞಾನಿ ಗೌತಮ ಬುದ್ಧ ಎಂದು ಹೇಳಿದರು.
ಯಾವುದೆ ಆಚರಣೆಗಳು ಮನೆಯಿಂದ ಆರಂಭವಾಗುತ್ತವೆ. ಆದ್ದರಿಂದ ಇಂದಿನ ಮಕ್ಕಳಿಗೆ ಬೌದ್ಧ ಧಮ್ಮದ ಸಂಸ್ಕಾರವನ್ನು ಕಲಿಸುವ ಕೆಲಸವಾಗಬೇಕು. ಬೌದ್ಧ ಧರ್ಮದ ಸಂಸ್ಕಾರ ತನ್ನ ಶ್ರೇಷ್ಠತೆಯನ್ನು ಉಳಿಸಿಕೊಂಡಿರುವುದಿಂದಲೆ ವಿಶ್ವಾದ್ಯಂತ ಹರಡಿದೆ. ಇತ್ತೀಚಿನ ದಿನಗಳಲ್ಲಿ ಅರಿವು, ಪ್ರೀತಿ ಕಡಿಮೆಯಾಗುತ್ತಿದೆ. ಪ್ರೀತಿ ಮತ್ತು ಪ್ರಜ್ಞೆ ಕಡಿಮೆಯಾದಲ್ಲಿ ಅಜ್ಞಾನ ಮತ್ತು ಅಹಂಕಾರ ಬೇರೂರುತ್ತದೆ. ನಾವು ಎಲ್ಲರನ್ನೂ ಪ್ರೀತಿಸುವ ಗುಣ ಬೆಳೆಸಿಕೊಂಡಾಗ ಇದು ತನ್ನಿಂದ ದೂರವಾಗುತ್ತದೆ ಎಂದರು.
ಸಾಹಿತಿ ಪ್ರೊ.ರಹಮತ್ ತರೀಕೆರೆ, ಸಮಿತಿಯ ಪ್ರಧಾನ ಕಾರ್ಯದರ್ಶಿ ಆರ್.ಮಹದೇವಪ್ಪ ಮಾತನಾಡಿದರು.
ಸಹ ಕಾರ್ಯದರ್ಶಿ ಎಚ್.ಶಿವರಾಜ್, ಎಂ.ಸಾವಕಯ್ಯ, ಬೆಂಗಳೂರು ಯೋಜನಾ ಇಲಾಖೆಯ ಪ್ರದೇಶ ಅಭಿವೃದ್ಧಿ ಮಂಡಳಿ ನಿರ್ದೇಶಕ ಡಿ. ಚಂದ್ರಶೇಖರಯ್ಯ, ಸಮಿತಿ ಅಧ್ಯಕ್ಷ ಪ್ರೊ.ಡಿ.ನಂಜುಂಡಯ್ಯ, ನಿವೃತ್ತ ಇಂಜಿನಿಯರ್ ಆರ್.ನಟರಾಜ್, ಮಾಜಿ ಮೇಯರ್ ಪುರುಷೋತ್ತಮ್, ಮುಖಂಡರಾದ ರಾಜು ಹಂಪಾಪುರ, ಪುಟ್ಟಸ್ವಾಮಿ, ರಾಜಮ್ಮ, ಬಿ.ಗಾಯತ್ರಿ ದೇವಿ, ಕೆ.ಎಂ.ಪುಟ್ಟು, ಎಂ.ಕೆ. ದಾಸ್, ಬಿ.ಬೋರಯ್ಯ, ಎಂ.ಬಸವರಾಜು, ನಿಸರ್ಗ ಸಿದ್ದರಾಜು, ಪಿ. ನಿರಂಜನ್ ಇದ್ದರು.