

ಎನ್.ಆರ್.ಪುರ: ಪಾಲಕರು ಮಕ್ಕಳಿಗೆ ಸಂಸ್ಕಾರ ಕಲಿಸಬೇಕು ಎಂದು ಉಡುಪಿ ತಾಲೂಕು ಉಪ್ಪೂರಿನ ಪುರೋಹಿತ ಬಿ.ರಾಘವೇಂದ್ರ ಭಟ್ ತಿಳಿಸಿದರು.
ಶುಕ್ರವಾರ ವಗ್ಗಡೆ ಗ್ರಾಮದ ಹಾಲಗಿರಿಯಲ್ಲಿ ಶ್ರೀ ತಿರುಮಲೇಶ್ವರ ಮತ್ತು ಶ್ರೀ ವನದುರ್ಗಾ ಪರಮೇಶ್ವರಿ ದೇವಸ್ಥಾನದ ಜೀರ್ಣೋದ್ಧಾರ ಪ್ರತಿಷ್ಠಾಪನಾ ಮಹೋತ್ಸವದಲ್ಲಿ ಮಾತನಾಡಿ, ವಗ್ಗಡೆ ಹಾಲಗಿರಿಯಲ್ಲಿ ಉಮಾಮಹೇಶ್ವರ ದೇವಸ್ಥಾನ ಮೂಲವಾಗಿತ್ತು. ಇಲ್ಲಿ ಒಂದು ಕಲ್ಲು ಮಾತ್ರ ಇತ್ತು. ಈಗ ದೇವಸ್ಥಾನ ಜೀರ್ಣೋದ್ಧಾರವಾಗಿದೆ. ಕಲ್ಲಿಗೆ ಚೈತನ್ಯ ಬರಬೇಕಾದರೆ ಜನರಲ್ಲಿ ನಂಬಿಕೆ, ಶ್ರದ್ಧೆ, ಭಕ್ತಿ ಇರಬೇಕು. ಆಗಲೇ ಕಲ್ಲಿನಲ್ಲೂ ದೇವರನ್ನು ಕಾಣಲು ಸಾಧ್ಯ ಎಂದರು.
ಪಂಚ ಶಕ್ತಿಗಳು ನಮ್ಮ ದೇಹದಲ್ಲಿರುತ್ತವೆ. ಅದನ್ನು ನಾವು ಗುರುತಿಸಬೇಕು. ನಮ್ಮ ಆತ್ಮದಲ್ಲೇ ಪರಮಾತ್ಮನನ್ನು ಕಾಣುತ್ತೇವೆ. 6 ವರ್ಷದೊಳಗೇ ಮಕ್ಕಳಿಗೆ ಸಂಸ್ಕಾರ ಕಲಿಸಿಕೊಡಬೇಕು ಎಂದು ಹೇಳಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೊಪ್ಪ, ಎನ್.ಆರ್.ಪುರ ತಾಲೂಕು ಯೋಜನಾಧಿಕಾರಿ ನಿರಂಜನ್ ಮಾತನಾಡಿ, ಊರಿಗೆ ಒಂದು ದೇವಸ್ಥಾನ, ಶಾಲೆ ಬೇಕು. ಗ್ರಾಮಸ್ಥರು ಪ್ರತಿನಿತ್ಯ ದೇವಸ್ಥಾನಕ್ಕೆ ಹೋಗಬೇಕು. ದೇವಸ್ಥಾನದಲ್ಲಿ ಧಾರ್ಮಿಕ ಕಾರ್ಯಕ್ರಮದ ಜತೆಗೆ ಶೈಕ್ಷಣಿಕ, ಸಾಮಾಜಿಕ ಕಾರ್ಯಕ್ರಮಗಳನ್ನೂ ನಡೆಸಬೇಕು ಎಂದರು.
ದೇವಸ್ಥಾನದಲ್ಲಿ ಪುಣ್ಯಾಹ, ಪ್ರತಿಷ್ಠಾ ಬಂಧ, ಪ್ರತಿಷ್ಠೆ, ಚಂಡಿಕಾ ಶಾಂತಿ ಯಾಗ, ಪಂಚವಿಂಷತಿ, ಬ್ರಹ್ಮಕಲಶ ಕಲಾತತ್ವ ಅಧಿವಾಸ ಹೋಮ, ಕಲಶಾಭಿಷೇಕ, ಮಹಾಪೂಜೆ ನಡೆಯಿತು.
ಹಾಲಗಿರಿ ದೇವಸ್ಥಾನದ ಸಮಿತಿ ಅಧ್ಯಕ್ಷ ಸಿದ್ದಪ್ಪ ಗೌಡ, ಗ್ರಾಮದ ಪ್ರಮುಖರಾದ ಹಿರೇಬೈಲು ರವೀಂದ್ರ, ವಗ್ಗಡೆ ಮಂಜಪ್ಪ ಗೌಡ, ಹಂಪನಕೊಡಿಗೆ ಬಾಲಪ್ಪ ಗೌಡ, ನಿವೃತ್ತ ಇಂಜಿನಿಯರ್ ಎಸ್.ಟಿ.ಗೌಡ, ಗದ್ದೇಮನೆ ಅಣ್ಣೇಗೌಡ, ಮಾವಿನಮನೆ ನಾಗರಾಜ ಗೌಡ, ಬಾಳೆ ಗ್ರಾಪಂ ಅಧ್ಯಕ್ಷೆ ರತ್ನಮ್ಮ, ಬಂಗವಾನಿ ಚೇತನ್, ಮೋಹನ್ ಇದ್ದರು.