ಮಕ್ಕಳಿಗೆ ಶಿಕ್ಷಣದ ಜತೆಗೆ ಸಂಸ್ಕಾರ ಕಲಿಸಿ: ಶಾಸಕ ಜಿ.ಟಿ.ದೇವೇಗೌಡ ಶಿಕ್ಷಕರಿಗೆ ಸಲಹೆ

11
Published on

ಮೈಸೂರು: ಶಿಕ್ಷಣ ನೀಡುವ ಮೂಲಕ ಮಕ್ಕಳನ್ನು ಬುದ್ಧಿವಂತರನ್ನಾಗಿ ಮಾಡುವ ಜತೆಗೆ ಸಂಸ್ಕಾರವಂತರನ್ನಾಗಿ ಮಾಡಬೇಕು ಎಂದು ಶಾಸಕ ಜಿ.ಟಿ.ದೇವೇಗೌಡ ಶಿಕ್ಷಕರಿಗೆ ಸಲಹೆ ನೀಡಿದರು.

ಮೈಸೂರು ತಾಲೂಕಿನ ನಾಗನಹಳ್ಳಿಯಲ್ಲಿ ಶುಕ್ರವಾರ ಆಯೋಜಿಸಿದ್ದ ತಾಲೂಕು ಮಟ್ಟದ ಶಾಲಾ ಪುನರಾರಂಭ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಮಕ್ಕಳು ಬೆಳಗ್ಗೆ ಎದ್ದ ತಕ್ಷಣ ಯೋಗ, ಧ್ಯಾನ ಅಭ್ಯಾಸ ಮಾಡಿಕೊಳ್ಳಬೇಕು. ಶಾಲೆಯಲ್ಲಿ ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗಿಯಾಗಬೇಕು. ಶಿಕ್ಷಕರು ತಾರತಮ್ಯ ಮಾಡದೆ ಪರಸ್ಪರ ಪ್ರೀತಿ, ವಿಶ್ವಾಸದಿಂದ ಕೆಲಸ ಮಾಡಬೇಕು ಎಂದು ಹೇಳಿದರು.

ಇಂದಿನ ಮಕ್ಕಳಿಗೆ ನೈತಿಕ, ಮಾನವೀಯ ಶಿಕ್ಷಣ ಕಲಿಸಿ ಸಂಸ್ಕಾರವಂತರಾಗುವಂತೆ ಮಾಡಬೇಕು. ಅದಕ್ಕೆ ತಕ್ಕಂತೆ ಶಿಕ್ಷಕರು ಶಿಕ್ಷಣ ಕಲಿಸಬೇಕು. ಇದರಿಂದ ಸಮಾಜಕ್ಕೆ ಉತ್ತಮ ಪ್ರಜೆಗಳನ್ನು ನೀಡಿದ ಕೀರ್ತಿ ನಿಮ್ಮದಾಗುತ್ತದೆ ಎಂದರು.

ಮಕ್ಕಳು ಶಾಲೆಗೆ ಕಡ್ಡಾಯವಾಗಿ ಬರುವಂತೆ ನೋಡಿಕೊಳ್ಳಬೇಕು. ಒಂದು ವೇಳೆ ಮಕ್ಕಳು ಶಾಲೆಗೆ ಬಾರದಿದ್ದರೆ ಅಂತಹ ವಿದ್ಯಾರ್ಥಿಗಳ ಮನೆಗೆ ತೆರಳಿ ಪಾಲಕರೊಂದಿಗೆ ಚರ್ಚಿಸಿ ಶಾಲೆಗೆ ಕಳುಹಿಸುವಂತೆ ಶಿಕ್ಷಕರು ನೋಡಿಕೊಳ್ಳಬೇಕು ಎಂದು ತಿಳಿಸಿದರು.

ಸರ್ಕಾರದಿಂದ ಮಕ್ಕಳಿಗೆ ಸಿಗುವ ಸೌಲಭ್ಯಗಳನ್ನು ತಿಳಿಸಿಕೊಡಬೇಕು. ಸರ್ಕಾರ ಶಿಕ್ಷಕರಿಗೂ ಸೌಲಭ್ಯ ನೀಡುತ್ತಾ ಬರುತ್ತಿದೆ. ಹಾಗಾಗಿ ಶಿಕ್ಷಕರು ಬದ್ಧತೆಯಿಂದ ಕೆಲಸ ಮಾಡಬೇಕು. ಪಠ್ಯದ ಜತೆಗೆ ಕಲೆ, ನಾಟಕ, ಸಾಹಿತ್ಯ, ಕ್ರೀಡೆಯಂತಹ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಪ್ರೇರೇಪಿಸಬೇಕು ಎಂದರು.

ಶಿಕ್ಷಣ ಕಲಿಸುವುದಕ್ಕೆ ಸೀಮಿತವಾಗದೆ ಸಂಸ್ಕಾರಯುತ ಶಿಕ್ಷಣ ಕಲಿಸಬೇಕು. ಎಷ್ಟೇ ದೊಡ್ಡ ಸ್ಥಾನಕ್ಕೆ ಹೋದರೂ ಪ್ರಾಥಮಿಕ ಶಾಲೆಯ ಶಿಕ್ಷಕರನ್ನು ನೆನಪಿಸಿಕೊಳ್ಳುತ್ತಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗಲೂ ತಮ್ಮ ಮೇಸ್ಟ್ರು ರಾಚಪ್ಪ ಅವರನ್ನು ನೆನಪಿಸಿಕೊಳ್ಳುತ್ತಾರೆ ಎಂದರು.

ಖಾಸಗಿ ಶಿಕ್ಷಣ ಸಂಸ್ಥೆಗಳ ನಡುವೆ ಇಲವಾಲ ಸರ್ಕಾರಿ ಶಾಲೆಯಲ್ಲಿ ಮಕ್ಕಳ ಪ್ರವೇಶಕ್ಕೆ ಬೇಡಿಕೆ ಇದೆ. ಇದೇ ರೀತಿ ತಾಲೂಕಿನ ಬೇರೆ ಶಾಲೆಗಳಲ್ಲೂ ಬೇಡಿಕೆ ಉಂಟಾಗುವಂತೆ ಮಾಡಬೇಕು. ಶಿಕ್ಷಕರು ಗ್ರಾಮಸ್ಥರ ಸಹಕಾರದೊಂದಿಗೆ ಉತ್ತಮ ಫಲಿತಾಂಶ ತಂದು ಮಕ್ಕಳು ಉನ್ನತ ವ್ಯಾಸಂಗಕ್ಕೆ ಹೋಗುವಂತೆ ಮಾಡಬೇಕು ಎಂದು ಸಲಹೆ ನೀಡಿದರು.

ಮೈಸೂರು ತಾಲೂಕಿನ ಎಲ್ಲ ಸರ್ಕಾರಿ ಶಾಲೆಗಳನ್ನು ಹದ್ದುಬಸ್ತು ಮಾಡಿಸಿ ಖಾತೆ,ದಾಖಲಾತಿ ಮಾಡಿಕೊಡಿಸುವ ಜತೆಗೆ, ಮಕ್ಕಳಿಗೆ ಶುದ್ದ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಎಲ್ಲಿಯಾದರೂ ಸಮಸ್ಯೆ ಇದ್ದರೆ ನನ್ನ ಗಮನಕ್ಕೆ ತಂದರೆ ಅದನ್ನು ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.

ಶಾಲೆಗೆ ಆಗಮಿಸಿದ ಮಕ್ಕಳಿಗೆ ಸಿಹಿ ಕೊಟ್ಟು ಸ್ವಾಗತಿಸಲಾಯಿತು. ಬಳಿಕ ಕಾರ್ಯಕ್ರಮದಲ್ಲಿ ಸಂವಿಧಾನ ಪೀಠಿಕೆ ವಾಚಿಸಲಾಯಿತು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಜವರೇಗೌಡ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಶ್ಮಿ, ಮಾಜಿ ಅಧ್ಯಕ್ಷ ಭಾಸ್ಕರ್, ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಕಾಶ್, ಮುಖಂಡರಾದ ದಿನೇಶ್, ಮಾಲೇಗೌಡ, ಮಹದೇವಪ್ಪ, ವಿಜಯಶಂಕರ್, ರಾಜು, ಭವ್ಯ, ಜನಾರ್ಧನ್, ಕೃಷ್ಣಪ್ಪ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net