

ಬೇಲೂರು: ಪ್ರಸ್ತುತ ದಿನಗಳಲ್ಲಿ ಶಿಕ್ಷಕರು ಹಾಗೂ ಪಾಲಕರು ಮಕ್ಕಳಿಗೆ ಹೆಚ್ಚಿನ ಅಂಕ ಗಳಿಸಲು ಉತ್ತೇಜನ ನೀಡಿದಂತೆ ಸೇವಾ ಮನೋಭಾವ, ಸಂಸ್ಕಾರವನ್ನೂ ಸಹ ಕಲಿಸಬೇಕಿದೆ ಎಂದು ಲಯನ್ಸ್ ಕ್ಲಬ್ ಮಾಜಿ ಪ್ರಾಂತಪಾಲ ಮಂಜುನಾಥ ಮೂರ್ತಿ ಸಲಹೆ ನೀಡಿದರು.
ಪಟ್ಟಣದ ಲಯನ್ಸ್ ಕ್ಲಬ್ ಭವನದಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ ನೂತನ ಲಯನ್ಸ್ ಕ್ಲಬ್ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಭಾವೈಕ್ಯತೆ, ಸಹಬಾಳ್ವೆ, ಸೇವಾ ಮನೋಭಾವ ಬೆಳೆಸಿಕೊಂಡರೆ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ರೂಪುಗೊಳ್ಳಲು ಸಾಧ್ಯ. ಆದ್ದರಿಂದ ಇಂದಿನ ಯುವಕರು ಸೇವಾ ಮನೋಭಾವ, ರಾಷ್ಟ್ರೀಯತೆ, ಶಿಸ್ತು, ಸಮಯ ಪಾಲನೆ ಮಾಡಿದರೆ ಜೀವನದ ಮೌಲ್ಯಗಳನ್ನು ಕಲಿಸಿಕೊಡುತ್ತದೆ. ಒಂದು ದೇಶದ ಮೌಲ್ಯವನ್ನು ಅಳೆಯುವುದು ಹಣದಿಂದಲ್ಲ, ದೇಶದ ಪ್ರಾಮಾಣಿಕ ಯುವ ಜನರ ಆಧಾರದ ಮೇಲಿರುತ್ತದೆ. ಈ ನಿಟ್ಟಿನಲ್ಲಿ ಯುವಕರನ್ನು ಸನ್ಮಾರ್ಗದಲ್ಲಿ ಕರೆದೊಯ್ಯುವುದು ಎಲ್ಲರ ಜವಾಬ್ದಾರಿವಾಗಿದೆ ಎಂದರು.
ಲಯನ್ಸ್ ಕ್ಲಬ್ ಜಗತ್ತಿನ ಎಲ್ಲ ರಾಷ್ಟ್ರಗಳಲ್ಲೂ ಸಾವಿರಾರು ಶಾಖೆಗಳನ್ನು ಹೊಂದಿ ಸರ್ಕಾರ, ಸಂಘ ಸಂಸ್ಥೆಗಳಿಂದ ಅನುದಾನ ಪಡೆಯದೆ ಕ್ಲಬ್‌ನ ಸದಸ್ಯರೇ ತಮ್ಮ ದುಡಿಮೆಯ ಒಂದು ಭಾಗವನ್ನು ಸೇವಾ ಕಾರ್ಯಕ್ಕೆ ಅರ್ಪಿಸುತ್ತಿದ್ದಾರೆ. ಇಂತಹ ಲಯನ್ಸ್ ಸಂಸ್ಥೆಗೆ ಸೇವಾ ಮನೋಭಾವವುಳ್ಳವರು ಸದಸ್ಯರಾಗುವಂತೆ ಪ್ರೇರಣೆ ನೀಡಬೇಕು. ಬೇಲೂರು ಲಯನ್ಸ್ ಕ್ಲಬ್ ಜಿಲ್ಲೆಯಲ್ಲೆ ಉತ್ತಮವಾಗಿ ಕೆಲಸ ಮಾಡುತ್ತಿದೆ. ಉತ್ತಮ ಭವನ ಹೊಂದಿದೆ. ಇಂತಹ ಭವನ ಇನ್ನು ಮುಂದೆ ಸಾರ್ವಜನಿಕರಿಗೆ ಉಪಯೋಗವಾಗಲು ಇಲ್ಲಿ ಶಾಶ್ವತವಾದ ಆರೋಗ್ಯ ಸೇರಿದಂತೆ ಇನ್ನಿತರ ಕಾರ್ಯಕ್ರಮ ನಡೆಸಲು ಮುಂದಾಗಬೇಕಿದೆ ಎಂದರು.
ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ಡಾ.ಚಂದ್ರಮೌಳಿ ಮಾತನಾಡಿ, ಕಳೆದ ವರ್ಷ ಸರ್ವ ಸದಸ್ಯರ ಸಹಕಾರದಿಂದ ಉತ್ತಮ ಸೇವಾ ಕಾರ್ಯಕ್ರಮ ಮಾಡಲಾಗಿದೆ. ಮುಂದೆ ಗ್ರಾಮೀಣ ಪ್ರದೇಶಗಳಿಗೂ ತೆರಳಿ ಆರೋಗ್ಯ ಸೇವೆ ಮಾಡಬೇಕಿದೆ. ಜತೆಗೆ ನಮ್ಮ ಲಯನ್ಸ್ ಕ್ಲಬ್ ಆಧಾರ ಸ್ತಂಭವಾಗಿದ್ದ ಮಾಜಿ ಅಧ್ಯಕ್ಷ ರಮೇಶ ಕುಮಾರ್ ಸಾವು ನೋವು ತಂದಿದೆ ಎಂದರು.
ಲಯನ್ಸ್ ಕ್ಲಬ್ ನೂತನ ಅಧ್ಯಕ್ಷೆ ತಾರಾಮಣಿ ಸುರೇಶ್ ಮಾತನಾಡಿ, ನಾನು ಅಧ್ಯಕ್ಷರಾಗಲು ಸಹಕಾರ ನೀಡಿದಂತಹ ಎಲ್ಲ ಸದಸ್ಯರಿಗೆ ವಂದನೆಗಳನ್ನು ಸಲ್ಲಿಸುತ್ತೇನೆ. ನಿಮ್ಮೆಲ್ಲರ ಸಹಕಾರದಿಂದ ನನ್ನ ಅವಧಿಯಲ್ಲಿ ಅತ್ಯುತ್ತಮವಾದ ಸೇವಾ ಕಾರ್ಯಗಳನ್ನು ಮಾಡಲು ಮುಂದಾಗಲಿದ್ದೇನೆ ಎಂದರು.
ಲಯನ್ಸ್ ಕ್ಲಬ್ ಕ್ಯಾಬಿನೆಟ್ ಕಾರ್ಯದರ್ಶಿ ಚಂದ್ರೇಗೌಡ, ಪ್ರಾಂತೀಯ ಅಧ್ಯಕ್ಷ ರಾಬಿ ಸೋಮಯ್ಯ, ರಾಯಭಾರಿ ಪೂವಯ್ಯ, ವಲಯಾಧ್ಯಕ್ಷ ಲತೀಪ್, ಕಾರ್ಯದರ್ಶಿ ಆದರ್ಶ, ಖಜಾಂಚಿ ಸಂತೋಷ, ಮಾಜಿ ಅಧ್ಯಕ್ಷ ದಿನೇಶ ರಾವ್, ಚಾಮರಾಜ್, ಸುರೇಶ್ ಸೇರಿದಂತೆ ಇತರರಿದ್ದರು.