

ಮೇಲುಕೋಟೆ: ಶಾಲಾ-ಕಾಲೇಜು ಮಕ್ಕಳಿಗೆ ಅಕ್ಷರದ ಜತೆಗೆ ಸಂಸ್ಕಾರ ಕಲಿಸುವ ಕಾರ್ಯವನ್ನು ಶಿಕ್ಷಕರು ಹಾಗೂ ಪಾಲಕರು ಮಾಡಬೇಕು ಎಂದು ಪಾಂಡವಪುರ ಕ್ಷೇತ್ರ ಶಿಕ್ಷಣಾಧಿಕಾರಿ ರವಿಕುಮಾರ್ ಸಲಹೆ ನೀಡಿದರು.
ಮೇಲುಕೋಟೆಯ ಎಸ್‌ಇಟಿ ಪಬ್ಲಿಕ್ ಶಾಲೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದರು.
ಉದ್ಯೋಗ ಪಡೆಯುವುದಕ್ಕಾಗಿ ಕಲಿಕೆಗೆ ಸೀಮಿತವಾಗದೆ ಸಮಾಜಕ್ಕೆ ಕೊಡುಗೆ ನೀಡುವ ವ್ಯಕ್ತಿಯಾಗಿ ಬೆಳೆಯುವ ನಿಟ್ಟಿನಲ್ಲಿ ಶಾಲಾ ಶಿಕ್ಷಣ ಪೂರಕವಾಗಿರಬೇಕು. ಮೌಲ್ಯಯುತವಾದ ಶಿಕ್ಷಣ ನೀಡುವುದರಿಂದ ಸಮಾಜದಲ್ಲಿ ಬದಲಾವಣೆ ಕಾಣಲು ಸಾಧ್ಯವಿದೆ. ಮಕ್ಕಳಿಗೆ ಸಂಸ್ಕಾರ ಕಲಿಸಲು ಶ್ರಮಿಸೋಣ ಎಂದರು.
ಇತಿಹಾಸ ತಜ್ಞ ಹಾಗೂ ಮುಕ್ತವಿಶ್ವವಿದ್ಯಾನಿಲಯದ ಪ್ರಾಚೀನ ಇತಿಹಾಸ ವಿಭಾಗದ ಮುಖ್ಯಸ್ಥ ಪ್ರೊ.ಶಲ್ವಪ್ಪಿಳ್ಳೆ ಅಯ್ಯಂಗಾರ್ ಮಾತನಾಡಿ, ಮೇಲುಕೋಟೆ ಸಂಸ್ಕೃತ ಮತ್ತು ವೇದಾಧ್ಯಯನಕ್ಕೆ ಹೆಸರುವಾಸಿಯಾಗಿ ಜ್ಞಾನಮಂಟಪ ಎಂದೇ ಪ್ರಖ್ಯಾತವಾಗಿತ್ತು. ಅಷ್ಟೇನೂ ವಿದ್ಯಾವಂತರಲ್ಲದ ಶಿವನಂಜೇಗೌಡ ರಾಮಾನುಜರ ಕರ್ಮಭೂಮಿಯಾದ ಮೇಲುಕೋಟೆಯಲ್ಲಿ ಎಸ್‌ಇಟಿ ಪಾಲಿಟೆಕ್ನಿಕ್ ಹಾಗೂ ಶಾಲಾ-ಕಾಲೇಜುಗಳನ್ನು ಸ್ಥಾಪಿಸಿ ಸುತ್ತಮುತ್ತಲ ಗ್ರಾಮೀಣ ಪ್ರದೇಶದ ಸಾವಿರಾರು ವಿದ್ಯಾರ್ಥಿಗಳಲ್ಲಿ ಜ್ಞಾನದೀಪ ಬೆಳಗಿಸಿದರು. ಆ ಮೂಲಕ ಮೇಲುಕೋಟೆ ಜ್ಞಾನಮಂಟಪ ಎಂಬ ಹೆಸರಿಗೆ ಪೂರಕವಾಗಿ ಸೇವೆ ಮಾಡುತ್ತಿದ್ದಾರೆ. ಕಾಲೇಜಿನಲ್ಲಿ ವ್ಯಾಸಂಗ ಮಾಡಿದ ನೂರಾರು ಮಂದಿ ದೇಶಾದ್ಯಂತ ಬದುಕು ಕಟ್ಟಿಕೊಂಡಿದ್ದಾರೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥಾಪಕ ಅಧ್ಯಕ್ಷ ಶಿವನಂಜೇಗೌಡ, ನಾನು ಬಡಕುಟುಂಬದಲ್ಲಿ ಹುಟ್ಟಿ ಹೆಚ್ಚು ವ್ಯಾಸಂಗ ಮಾಡದಿದ್ದರೂ ಚೆಲುವನಾರಾಯಣಸ್ವಾಮಿಯ ಕೃಪೆಯಿಂದ ಉದ್ಯಮಿಯಾಗಿ ಬೆಳೆದಿದ್ದೇನೆ. ನನ್ನಂತೆ ಶಿಕ್ಷಣದಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ವಂಚಿತರಾಗಬಾರದು ಎನ್ನುವ ಕಾರಣಕ್ಕೆ ಮೇಲುಕೋಟೆಯಲ್ಲಿ ಎಸ್‌ಇಟಿ ಶಿಕ್ಷಣ ಸಂಸ್ಥೆಯನ್ನು ಸೇವೆಗಾಗಿ ಆರಂಭಿಸಲಾಗಿದೆ. ಮುಂಬರುವ ಶೈಕ್ಷಣಿಕ ವರ್ಷದಿಂದ ಪಬ್ಲಿಕ್‌ಶಾಲೆಯಲ್ಲಿ ಸಿಬಿಎಸ್‌ಸಿ ತರಗತಿಗಳನ್ನು ಆರಂಭಿಸಲಾಗುತ್ತದೆ. ಗ್ರಾಮೀಣ ಪ್ರದೇಶದ ಮಕ್ಕಳು ಮತ್ತು ಪಾಲಕರು ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಸಮಾರಂಭದಲ್ಲಿ ಪಾಂಡವಪುರ ಕ್ಷೇತ್ರ ಸಮನ್ವಯಾಧಿಕಾರಿ ಪ್ರಕಾಶ್, ಎಸ್‌ಇಟಿ ಸಮೂಹ ಶಿಕ್ಷಣ ಸಂಸ್ಥೆಯ ರಿಜಿಸ್ಟಾರ್ ನಿಂಗೇಗೌಡ ಎಸ್‌ಇಟಿ ಪಬ್ಲಿಕ್‌ಶಾಲೆಯ ಆಡಳಿತಾಧಿಕಾರಿ ವಿ.ವೆಂಕಟರಾಮೇಗೌಡ, ಎಸ್‌ಇಟಿ ಪ್ರಾಂಶುಪಾಲ ವೀರಭದ್ರಸ್ವಾಮಿ, ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆಯ ಮುಖ್ಯಶಿಕ್ಷಕ ಎಸ್.ಎನ್ ಸಂತಾನರಾಮನ್, ಸಿಆರ್‌ಪಿ ಬೆಟ್ಟಸ್ವಾಮಿಗೌಡ ಭಾಗವಹಿಸಿದ್ದರು.
ಸಮಾರಂಭದ ನಂತರ ಶಾಲಾ ಶಿಕ್ಷಕಿಯರ ಮಾರ್ಗದರ್ಶನದಲ್ಲಿ ಎಸ್‌ಇಟಿ ಪಬ್ಲಿಕ್ ಶಾಲೆಯ ಮಕ್ಕಳು ನಡೆಸಿಕೊಟ್ಟ ಸಮೂಹನೃತ್ಯಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರೇಕ್ಷಕರ ಮನಸೂರೆಗೊಂಡುವು. ಒಂದನೇ ತರಗತಿಯಿಂದ ಹತ್ತನೇ ತರಗತಿಯವರೆಗಿನ ಶಾಲಾ ಮಕ್ಕಳು ಮಾಡಿದ ಸಮೂಹ ನೃತ್ಯಕ್ಕೆ ಪ್ರೇಕ್ಷಕರು ಶಿಳ್ಳೆಹೊಡೆದು ಪ್ರೋತ್ಸಾಹಿಸಿದರು. ಇದೇ ವೇಳೆ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ, ತರಗತಿಗೊಬ್ಬ ಉತ್ತಮವಿದ್ಯಾರ್ಥಿಗೆ ಬಹುಮಾನ ವಿತರಿಸಲಾಯಿತು.