ಮಕ್ಕಳಿಗೆ ಸಂಸ್ಕೃತಿ, ಸಂಸ್ಕಾರ ಕಲಿಸಿ

15 TKE 1,1(1)
Published on

ತರೀಕೆರೆ: ಮೊಬೈಲ್ ಗೀಳು ಮಕ್ಕಳ ಮನೋ ವಿಕಾಸದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ಲಯನ್ಸ್ ಕ್ಲಬ್ ಅಧ್ಯಕ್ಷ ಎ.ಎಸ್.ಸಾಯಿಕುಮಾರ್ ಹೇಳಿದರು.

ಪಟ್ಟಣದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಲಯನ್ಸ್ ಇಂಟರ್ ನ್ಯಾಷನಲ್ ಹಾಗೂ ತರೀಕೆರೆ ಲಯನ್ಸ್ ಕ್ಲಬ್ ಸಹಯೋಗದಲ್ಲಿ ಏರ್ಪಡಿಸಿದ್ದ ಮಕ್ಕಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇತ್ತೀಚೆಗೆ ಕೆಲವೊಂದು ಪಾಶ್ಚಿಮಾತ್ಯ ದೇಶಗಳಲ್ಲಿ 16 ವರ್ಷದೊಳಗಿನ ಮಕ್ಕಳು ಮೊಬೈಲ್ ಮತ್ತು ಇಂಟರ್‌ನೆಟ್ ಬಳಸುವುದನ್ನು ನಿರ್ಬಂಧಿಸಿದೆ. ಶಿಕ್ಷಕರ ಜತೆ ಪಾಲಕರು ಮಕ್ಕಳಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು. ಅವರ ಮನಸ್ಸಿನಲ್ಲಿ ಒಳ್ಳೆಯ ಭಾವನೆಗಳನ್ನು ಬಿತ್ತುವ ಕೆಲಸ ಮಾಡಬೇಕು ಎಂದರು.

ಮಕ್ಕಳಲ್ಲಿ ಒಂದು ಹಂತದವರೆಗೆ ತುಂಟುತನ ಸಹಜವಾದರೂ ನಂತರದ ಹಂತಗಳಲ್ಲಿ ಸುಂಸ್ಕೃತರಾಗಿ ಸಂಸ್ಕಾರ ಕಲಿಯಲು ಬೇಕಾದಂತೆ ಬದಲಾಯಿಸುವ ಕೆಲಸವಾಗಬೇಕು. ಪುಸ್ತಕ ಓದುವ ಹವ್ಯಾಸ ಜ್ಞಾನ ವೃದ್ಧಿಗೆ ಸಹಕಾರಿಯಾಗಲಿದ್ದು, ಮಕ್ಕಳು ಓದಿನ ಕಡೆ ಹೆಚ್ಚಿನ ಗಮನ ಹರಿಸಬೇಕು ಎಂದು ಹೇಳಿದರು.

ಲಯನ್ಸ್ ಕ್ಲಬ್ ಉಪಾಧ್ಯಕ್ಷ ಟಿ.ಎನ್.ಮಂಜುನಾಥ್, ಕಾರ್ಯದರ್ಶಿ ಟಿ.ಆರ್.ಮುರಳಿ, ಖಜಾಂಚಿ ಟಿ.ಎಂ.ಹರೀಶ್, ನಿರ್ದೇಶಕರಾದ ಡಾ.ಟಿ.ಎಂ.ದೇವರಾಜ್, ರವಿಕುಮಾರ್, ಆನಂದಪ್ಪ, ರಾಜಶೇಖರ್, ಪ್ರಭಾರಿ ಮುಖ್ಯಶಿಕ್ಷಕಿ ಸುಮಿತ್ರ, ಸಹಶಿಕ್ಷಕ ಕಾಂತರಾಜು ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net