ಮಕ್ಕಳಿಗೆ ಶಿಕ್ಷಣದೊಂದಿಗೆ ಸಂಸ್ಕಾರ ಕಲಿಸಿ

KERUR 1
ಕೆರೂರ ಬನಶಂಕರಿ ದೇವಸ್ಥಾನದಲ್ಲಿ ನಡೆದ ಮುತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮದಲ್ಲಿ ಕುಟುಂಬ ಪ್ರಬೋಧನ ಜಿಲ್ಲಾ ಸಂಯೋಜಕ ಶ್ರೀಶೈಲ ಹುನ್ನೂರ ಮಾತನಾಡಿದರು.
Published on

ಕೆರೂರ: ಬಾಲ್ಯದಿಂದಲೇ ಮಕ್ಕಳಿಗೆ ಶಿಕ್ಷಣದೊಂದಿಗೆ ಸಂಸ್ಕಾರ ಹೇಳಿಕೊಟ್ಟು ಕುಟುಂಬವನ್ನು ಸಂಸ್ಕಾರಯುತವಾಗಿಸುವಂತೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕುಟುಂಬ ಪ್ರಬೋಧನ ಜಿಲ್ಲಾ ಸಂಯೋಜಕ ಶ್ರೀಶೈಲ ಹುನ್ನೂರ ಹೇಳಿದರು.

ಕೆರೂರ ಶ್ರೀ ಬನಶಂಕರಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ನಿಮಿತ್ತ ಬುಧವಾರ ಹಮ್ಮಿಕೊಂಡ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಕ್ಕಳು ಪಾಲಕರ ಕೆಲಸ, ನಡವಳಿಕೆ ನೋಡಿ ಕಲಿಯುತ್ತಾರೆ. ಮೊದಲು ತಂದೆ-ತಾಯಿಗಳು ಸೂರ್ಯೋದಯಕ್ಕಿಂತ ಮುನ್ನವೇ ಎದ್ದು ಮಕ್ಕಳಿಗೆ ಯೋಗ, ಪ್ರಾಣಾಯಾಮದಂತಹ ಶಾರೀರಿಕ ಚಟುವಟಿಕೆಯಲ್ಲಿ ತೊಡಗುವಂತೆ ಮಾಡಬೇಕು. ನಂತರ ದೇವರ ನಾಮ ಸ್ಮರಣೆ, ಪೂಜೆ, ಪ್ರಾರ್ಥನೆ ಹೇಳಿ ಕೊಡಬೇಕು ಎಂದರು.

ರಾಮಭಟ್ಟ ಜೋಶಿ ಸಾನ್ನಿಧ್ಯ ವಹಿಸಿ ಮಾತನಾಡಿ, ಉಡಿ ತುಂಬುವ ಕಾರ್ಯ ಅತ್ಯಂತ ಶ್ರೇಷ್ಠವಾಗಿದ್ದು, ಸಮಾಜದಲ್ಲಿ ಅನ್ಯೋನ್ಯತೆ ಬೆಳೆಸಲು ಸಹಾಯಕವಾಗಿದೆ ಎಂದರು.

ಸಾವಿರಾರು ಮುತ್ತೈದೆಯರಿಗೆ ಅರಿಶಿಣ, ಕುಂಕುಮ ಹಚ್ಚಿ ಉಡಿ ತುಂಬಲಾಯಿತು. ನವರಾತ್ರಿ ಪ್ರಯುಕ್ತ ಬನಶಂಕರಿ ದೇವಿಗೆ ಮಧುರೈ ಮೀನಾಕ್ಷಿದೇವಿ ಅಲಂಕಾರ ಮಾಡಲಾಗಿತ್ತು. ಭಕ್ತರು ಸರದಿಯಲ್ಲಿ ನಿಂತು ದೇವಿ ದರ್ಶನ ಪಡೆದರು.

ದೇವಾಂಗ ಸಮಾಜದ ಅಧ್ಯಕ್ಷ ಸಂಕಣ್ಣ ಹೊಸಮನಿ, ಹಿಂದಿನ ಅಧ್ಯಕ್ಷ ದಶರಥಪ್ಪ ಅಂಕದ, ಪುರಾಣಿಕ ಮಂಜುನಾಥ ಗೌಡರ, ಅರ್ಚಕ ಯಂಕಣ್ಣ ಗುಡಿಸಾಗರ, ಸುನೀಲ ಗುಡಿಸಾಗರ, ಹಿರಿಯರಾದ ಶಿವಪ್ಪ ಹೆಬ್ಬಳ್ಳಿ, ರಾಚೋಟೇಶ್ವರ ಕುದರಿ, ಎಲ್. ಎಚ್. ಕ್ವಾಣ್ಣೂರ, ಮಹಾಂತೇಶ ಮಣಸಗಿ, ಪಪಂ ಮುಖ್ಯಾಧಿಕಾರಿ ರಮೇಶ ಮಾಡಬಾಳ, ಪಪಂ ಮಾಜಿ ಅಧ್ಯಕ್ಷ ಸದಾನಂದ ಮದಿ, ರಾಚಪ್ಪ ಜಿಗೇರಿ,ನಿಜಗುಣಿ ಹರದೊಳ್ಳಿ, ಮಯೂರ ರೂಡಗಿ, ಕೊಬ್ಬನ್ನ ಸೂಲಿಕೇರಿ, ಪಾಂಡಪ್ಪ ಹುಚ್ಚಪ್ಪರನವರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net