

ಕಡೂರು: ಶೈಕ್ಷಣಿಕವಾಗಿ ತರಬೇತಿ ನೀಡುವ ಜತೆಗೆ ಅತ್ಯುತ್ತಮ ಸಂಸ್ಕಾರ ಕಲಿಸಿದ ಶಿಕ್ಷಕರನ್ನು ವಿದ್ಯಾರ್ಥಿಗಳು ಸದಾ ಸ್ಮರಿಸಬೇಕು ಎಂದು ತಹಸೀಲ್ದಾರ್ ಎಂ.ಪಿ.ಕವಿರಾಜ್ ಹೇಳಿದರು.
ಪಟ್ಟಣದ ಪ್ರಜ್ಞಾ ಸೆಂಟ್ರಲ್ ಸ್ಕೂಲ್‌ನಲ್ಲಿ ಭಾನುವಾರ ನಡೆದ ಪ್ರಜ್ಞಾ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಹೆಚ್ಚು ಓದಿದಷ್ಟು ನಮ್ಮ ಜ್ಞಾನದ ಮಟ್ಟ ಹೆಚ್ಚುತ್ತದೆ. ಶಾಲೆಯಲ್ಲಿ ಕೇವಲ ಓದುವುದು ಮಾತ್ರವಲ್ಲ, ಪಠ್ಯೇತರ ಚಟುವಟಿಕೆಗಳಿಗೂ ಅವಕಾಶ ದೊರೆಯಬೇಕು. ಪ್ರಚಲಿತ ವಿದ್ಯಮಾನಗಳ ಬಗ್ಗೆ ಅರಿವಿರಬೇಕು. ಪಾಲಕರು ಕೇವಲ ಮಕ್ಕಳ ಅಂಕಗಳಿಕೆಯತ್ತ ಮಾತ್ರ ಗಮನ ಕೊಡದೇ ಶಾಲೆಯಲ್ಲಿ ಏನು ಕಲಿತರು ಹಾಗೂ ಅದನ್ನು ಹೇಗೆ ಸದುಪಯೋಗಪಡಿಸಿಕೊಂಡಿದ್ದಾರೆಂಬ ಬಗ್ಗೆ ಗಮನ ಹರಿಸಬೇಕು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದರಾಜನಾಯ್ಕ ಮಾತನಾಡಿ, ವಿದ್ಯಾರ್ಥಿಗಳು ಭವಿಷ್ಯದಲ್ಲಿ ಎಷ್ಟೇ ಎತ್ತರದ ಸ್ಥಾನ ಪಡೆದರೂ ತಾವು ಓದಿದ ಶಾಲೆ, ನಮ್ಮ ನೆಲ, ಭಾಷೆ ಬಗ್ಗೆ ಅಭಿಮಾನ ಹೊಂದಿರಬೇಕು. ಪಠ್ಯದ ಜತೆ ಪಠ್ಯೇತರ ಚಟುವಟಿಕೆಗಳಿಗೂ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು ಎಂದರು.