

ಕಾರ್ಗಲ್: ಮಕ್ಕಳಿಗೆ ವಿದ್ಯೆಯ ಜತೆಗೆ ಸಂಸ್ಕಾರ ಬಹಳ ಮುಖ್ಯ ಎಂದು ಕೆಪಿಸಿ ಎಂಪ್ಲಾಯಿಸ್ ಯೂನಿಯನ್ ಕೇಂದ್ರ ಸಮಿತಿ ಅಧ್ಯಕ್ಷ ಕೆ.ವೀರೇಂದ್ರ ತಿಳಿಸಿದರು.
ಪಟ್ಟಣದ ಕೆಪಿಸಿ ಅಫೀಷಿಯಲ್ಸ್ ರಿಕ್ರಿಯೇಶನ್ ಕ್ಲಬ್‌ನಲ್ಲಿ ಸೋಮವಾರ ಶರಾವತಿ ವಿದ್ಯಾಕೇಂದ್ರ ಮಕ್ಕಳಿಗಾಗಿ ಏರ್ಪಡಿಸಿದ್ದ ಕೃಷ್ಣವೇಷ ಸ್ಪರ್ಧೆಯಲ್ಲಿ ಮಾತನಾಡಿ, ಓದಿನ ಜತೆ ಸಂಸ್ಕಾರ ನೀಡಿದಾಗ ಮಾತ್ರ ಮಗುವಿನ ವಿದ್ಯಾಭ್ಯಾಸ ಪರಿಪೂರ್ಣವಾಗುತ್ತದೆ ಎಂದರು.
ತಾಯಿಯು ಮಗುವಿಗೆ ಕೃಷ್ಣ ವೇಷ ತೊಡಿಸಿ ಸಂಭ್ರಮಿಸುತ್ತಾಳೆ. ಇದು ಮುಂದುವರಿದಂತೆ ವಿದ್ಯಾದೇಗುಲಗಳಲ್ಲಿ ಇಂತಹ ಪ್ರದರ್ಶನಗಳನ್ನು ಆಯೋಜಿಸುವ ಮೂಲಕ ನಮ್ಮ ಸಂಸ್ಕೃತಿಯನ್ನು ಎತ್ತಿ ಹಿಡಿಯಲಾಗುತ್ತಿದೆ. ಮಕ್ಕಳಲ್ಲಿ ಅಡಗಿರುವ ಪ್ರತಿಭೆಗಳನ್ನು ಹೊರ ತರಲು ಈ ರೀತಿಯ ಕಾರ್ಯಕ್ರಮಗಳನ್ನು ನಡೆಸುತ್ತಿರುವ ಸಂಸ್ಥೆಗೆ ಅಭಿನಂದನೆ ಎಂದು ಸಂಸ್ಥೆ ನಡೆದು ಬಂದ ದಾರಿಯನ್ನು ಮೆಲುಕು ಹಾಕಿದರು.
ಆರಂಭದಲ್ಲಿ ವಂದೇ ಮಾತರಂ ಹಾಡಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಶ್ಲೋಕವನ್ನು ಪಠಿಸಲಾಯಿತು. ಬಳಿಕ ಅಮೃತ ಬಿಂದು, ಅಮೃತ ವಚನ, ಮಂಕುತಿಮ್ಮನ ಕಗ್ಗ, ಸುಭಾಷಿತ, ಸಮೂಹ ನೃತ್ಯ, ಸಮೂಹ ಫೋಟೊ, ಗುರು ನಮನ ಕಾರ್ಯಕ್ರಮಗಳು ಜರುಗಿದವು. ಪ್ರೀಕೆಜಿ, ಎಲ್‌ಕೆಜಿ ಹಾಗೂ ಯುಕೆಜಿ ಮಕ್ಕಳು ಕೃಷ್ಣ-ರಾಧೆ ವೇಷತೊಟ್ಟು ಸಂಭ್ರಮಿಸಿದರು. ವಿಜೇತ ಪುಟಾಣಿಗಳಿಗೆ ಬಹುಮಾನ ವಿತರಿಸಲಾಯಿತು.
ಕೆಪಿಸಿ ಕಾರ್ಯನಿರ್ವಾಹಕ ಅಭಿಯಂತರ ಆರ್.ಶಿವಕುಮಾರ್, ತಾಲೂಕು ಜೈನ ಸಮಾಜ ಅಧ್ಯಕ್ಷ ಎಂ.ಪಿ.ಲೋಕರಾಜ್ ಮರಬಿಡಿ, ಶರಾವತಿ ವಿದ್ಯಾಕೇಂದ್ರ ಆಡಳಿತ ಸಂಸ್ಥೆಯ ಪ್ರಮುಖರಾದ ನಾಗೇಂದ್ರ ರಾಯ್ಕರ್, ಕೇಶವಗೌಡ, ಜ್ಯೋತಿ ನೇಮಿರಾಜ್, ಪ್ರಗತಿ ಪ್ರದೀಪ್, ಸೌಮ್ಯಾ ವಿಶ್ವನಾಥ್, ಶ್ವೇತಾ ರವೀಂದ್ರ, ಅಜಿತ್, ಎನ್.ಎನ್.ಶ್ರೀಧರ್ ಭಟ್, ಬಬಿತಾ ಪ್ರೇಮ್‌ಕುಮಾರ್, ಗೋಪಿನಾಥ್ ಇತರರಿದ್ದರು. ಜೋಗ ಪ್ರೌಢಶಾಲೆ ಮುಖ್ಯಶಿಕ್ಷಕ ರಾಜೇಶ್, ರೂಪಾ ತಿಮ್ಮಪ್ಪ, ಕಲ್ಪನಾ ಸತೀಶ್ ತೀರ್ಪುಗಾರರಾಗಿದ್ದರು.