

ಲೋಕಾಪುರ: ಸರ್ಕಾರ ವಾಲ್ಮೀಕಿ ಸಮುದಾಯ ವಾಸಿಸುವ ಪ್ರತಿ ಗ್ರಾಮದಲ್ಲೂ ಸಮುದಾಯ ಭವನ ನಿರ್ಮಿಸಬೇಕು. ಆ ಮೂಲಕ ಸಮುದಾಯವು ಸಾಂಕ ಚಟುವಟಿಕೆ ಕೈಗೊಳ್ಳಲು ಅನುಕೂಲವಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಹೇಳಿದರು.
ಸಮೀಪದ ವರ್ಚಗಲ್ ಗ್ರಾಮದಲ್ಲಿ ಸೋಮವಾರ ಸಂಜೆ ಸಮಾಜ ಕಲ್ಯಾಣ ಇಲಾಖೆ ಹಾಗೂ ನಿರ್ಮಿತ ಕೇಂದ್ರದಿಂದ ಅಂದಾಜು 30 ಲಕ್ಷ ರೂಗಳಲ್ಲಿ ಮಹರ್ಷಿ ವಾಲ್ಮೀಕಿ ಸಮುದಾಯ ಭವನ ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರ ಪರಿಶಿಷ್ಟ ಜಾತಿ ಹಾಗೂ ಪಂಗಡದ ಮೀಸಲಾತಿ ಹೆಚ್ಚಿಸುವ ಮೂಲಕ ಸಾಮಾಜಿಕ ನ್ಯಾಯದಡೆಗೆ ಹೆಜ್ಜೆ ಹಾಕಿದೆ. ಈ ಸಮುದಾಯಗಳ ಶೈಕ್ಷಣಿಕ ಹಾಗೂ ಆರ್ಥಿಕಾಭಿವೃದ್ಧಿಗೆ ಪೂರಕವಾದ ಯೋಜನೆಗಳನ್ನು ತರಲಾಗಿದೆ ಎಂದರು.
ವರ್ಚಗಲ್ ಗ್ರಾಮದಲ್ಲಿ ವಾಲ್ಮೀಕಿ ಜನರ ಬಳಕೆಗೆ ಸಮುದಾಯ ನಿರ್ಮಿಸಿದ್ದು ಸಂತೋಷದ ಸಂಗತಿ. ಗ್ರಾಮದ ವಿದ್ಯಾವಂತ ಸಮುದಾಯ ಅದನ್ನು ಜ್ಞಾನ ದೇಗುಲದಂತೆ ಬಳಸಿಕೊಳ್ಳಬೇಕು ಎಂದು ತಿಳಿಸಿದರು.
ಬಳಿಕ ಗ್ರಾಮದಲ್ಲಿ 18 ಲಕ್ಷ ರೂ. ವೆಚ್ಚದ ಅಂಗನವಾಡಿ ಕೇಂದ್ರದ ನಿರ್ಮಾಣ ಕಾಮಗಾರಿ ಉದ್ಘಾಟಿಸಿ ಮಾತನಾಡಿದ ಸಚಿವರು, ಇಂದಿನ ಈ ಕಾಲಘಟ್ಟದಲ್ಲಿ ಮಕ್ಕಳು ಮಾನವೀಯ ಬಾಂಧವ್ಯ ಕಡಿಮೆಗೊಳಿಸುತ್ತಿದ್ದಾರೆ. ಇದರಿಂದ ಸಮಾಜಕ್ಕೆ ಮಾರಕವಾಗುವ ದಿನಗಳು ದೂರವಿಲ್ಲ. ಈ ನಿಟ್ಟಿನಲ್ಲಿ ಅಂಗನವಾಡಿ ಕೇಂದ್ರಗಳು ಎಚ್ಚೆತ್ತುಕೊಂಡು ಗುಣಾತ್ಮಕ ಶಿಕ್ಷಣ, ಸಂಸ್ಕಾರ ಕಲಿಸುವ ಕೇಂದ್ರಗಳಾಗಬೇಕಿದೆ ಎಂದರು.
ಲೋಕಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶೋಕ ಕಿವಡಿ ಮಾತನಾಡಿದರು.
ಬಿಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಶಿವಾನಂದ ಉದಪುಡಿ, ಗೋವಿಂದಪ್ಪ ಕೌಲಗಿ, ಲೋಕಣ್ಣಗೌಡ ವಿ. ಪಾಟೀಲ, ವಿಠ್ಠಲ ತುಳಸಿಗೇರಿ, ರಾಮನಗೌಡ ಪಾಟೀಲ, ಈರಪ್ಪ ಬಲ್ಕಿ, ವೆಂಕಪ್ಪ ಪೂಜಾರ, ಈರಣ್ಣ ಪೂಜಾರ, ಬಸಲಿಂಗಪ್ಪ ಕಟ್ಟಿ, ಬಸವರಾಜ ಹಣಗಲಿ, ಶ್ರೀಕಾಂತ ತುಳಸಿಗೇರಿ, ಲಂಕೇಶ ಮಾದರ, ಪುಂಡಲೀಕ ಮುತ್ತಣ್ಣವರ, ಯಂಕಣ್ಣ ಮುತ್ತಣ್ಣವರ, ಯಮನಪ್ಪ ಬುಡ್ರಿ, ಹಣಮಂತ ಮಾದರ, ತಹಸೀಲ್ದಾರ್ ಮಹಾದೇವ ಸನಮುರಿ, ತಾಲೂಕುಮಟ್ಟದ ಅಧಿಕಾರಿಗಳಾದ ಇಒ ಉಮೇಶ ಸಿದ್ನಾಳ, ಮಹಹಮ್ಮದ ಹನೀಫ್ ತಹಸೀಲ್ದಾರ್, ಮಹೇಶ ದಂಡನ್ನವರ, ವಿಜಯಕುಮಾರ ಜಿ.ಕೆ., ವಿದ್ಯಾ ಕೋರೆವ್ವಗೋಳ, ಬಸವರಾಜ ಅಂಬಿಗೇರ, ರಾಘವೇಂದ್ರ ಕಳ್ಳಿಮನಿ, ವಿನೋದ ಸಂಕೆಣ್ಣವರ, ವರ್ಚಗಲ್ ಗ್ರಾಮಸ್ಥರು, ರೈತರು ಇದ್ದರು.