

ಮೈಸೂರು: ವಿದ್ಯಾರ್ಥಿಗಳಿಗೆ ಭಾವ ಅರಳಿಸುವ ಕಲೆ, ಸಾಹಿತ್ಯ ಮತ್ತು ಬುದ್ಧಿಶಕ್ತಿಯನ್ನು ಹೆಚ್ಚಿಸುವ ಜ್ಞಾನ, ಶಿಸ್ತಿನ ವಿಷಯಗಳನ್ನು ಸಮ ಪ್ರಮಾಣದಲ್ಲಿ ಬೋಧಿಸಬೇಕಾಗಿದೆ ಎಂದು ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿವೃತ್ತ ನಿರ್ದೇಶಕಿ ಡಾ.ಪ್ರೀತಿ ಶುಭಚಂದ್ರ ಹೇಳಿದರು.
ಕೃಷ್ಣಮೂರ್ತಿಪುರಂನ ಶಾರದಾ ವಿಲಾಸ ಕಾಲೇಜಿನಲ್ಲಿ ಏರ್ಪಡಿಸಿದ್ದ ‘ಶಾರದೋತ್ಸವ-2024’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿಜ್ಞಾನ ಮತ್ತು ವಾಣಿಜ್ಯ ವಿಷಯಗಳ ವಿದ್ಯಾರ್ಥಿಗಳಿಗೆ ಭಾವಸ್ಪರ್ಶ ಇರಲೇಬೇಕು. ಈ ಕಾರಣಕ್ಕಾಗಿ ಸಾಹಿತ್ಯವನ್ನು ಕಡ್ಡಾಯವಾಗಿ ಬೋಧಿಸಲಾಗುತ್ತಿದೆ. ದುರಂತವೆಂದರೆ ಇಂದಿನ ಶಿಕ್ಷಣ ಸಂಸ್ಥೆಗಳು ಸಾಹಿತ್ಯ ಮತ್ತು ಕಲೆ ಆಧಾರಿತ ವಿಷಯವನ್ನು ಕಡೆಗಣಿಸಿ, ತಂತ್ರಜ್ಞಾನ ಆಧಾರಿತ ಬೌದ್ಧಿಕ ವಿಷಯಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಈ ಅಸಮತೋಲನ ಮಕ್ಕಳ ಮೇಲೆ ಪರಿಣಾಮ ಬೀರುತ್ತಿದೆ ಎಂದರು.
ಕಲೆ ಮತ್ತು ಸಾಹಿತ್ಯದಿಂದ ಹೊರತಾಗಿ ಬೆಳೆದ ಮಕ್ಕಳು ದೊಡ್ಡವರಾದಾಗ ಬದುಕಿನಲ್ಲಿ ಎದುರಾಗುವ ಸಮಸ್ಯೆ, ಸವಾಲು ಎದುರಿಸಲಾರದಷ್ಟು ದುರ್ಬಲರಾಗುತ್ತಾರೆ. ಜತೆಗೆ ತನ್ನ ಸಹಚರರು ಮತ್ತು ಸಮಾಜದ ಸಂಕಷ್ಟಗಳಿಗೂ ಸ್ಪಂದಿಸಲಾರದಷ್ಟು ಸಂವೇದನಾ ಶೂನ್ಯರಾಗುತ್ತಾರೆ. ಆದ್ದರಿಂದ ಕಲೆ-ಸಾಹಿತ್ಯವನ್ನು ಮಕ್ಕಳಿಗೆ ಕಲಿಸಬೇಕಾಗಿದೆ ಎಂದರು.
ಬುದ್ಧಿ ಮತ್ತು ಭಾವನೆಗಳು ಮನುಷ್ಯನ ವ್ಯಕ್ತಿತ್ವ ಮತ್ತು ಬದುಕಿಗೆ ಪ್ರಮುಖವಾಗಿವೆ. ಬುದ್ಧಿ ಮತ್ತು ಭಾವನೆಗಳೆರಡು ಪರಸ್ಪರ ಸಮಾಗಮಗೊಂಡಾಗಲೇ ಜೀವನ ಸುಂದರವಾಗುತ್ತದೆ. ಒಂದು ವೇಳೆ ಭಾವನೆಯನ್ನು ಹೊರತುಪಡಿಸಿ ಜ್ಞಾನಕೇಂದ್ರಿತ ವಿಷಯವೇ ಮೇಲುಗೈ ಸಾಧಿಸಿದರೆ ಮನುಷ್ಯರು ಸಂವೇದನಾಶೂನ್ಯರಾಗಿ ಬಿಡುತ್ತಾರೆ ಎಂದರು. ಶಾರದಾ ವಿಲಾಸ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎನ್.ಚಂದ್ರಶೇಖರ್, ಪ್ರಾಂಶುಪಾಲೆ ಡಾ.ಎಂ. ದೇವಿಕಾ ಇನ್ನಿತರರಿದ್ದರು.