

ಸಿದ್ದಾಪುರ: ಮಕ್ಕಳನ್ನು ಒಳ್ಳೆಯ ವಿದ್ಯಾವಂತರನ್ನಾಗಿಸುವುದರ ಜತೆಗೆ ಬುದ್ಧಿವಂತರನ್ನಾಗಿಸುವುದು ಪ್ರತಿಯೊಬ್ಬ ತಂದೆ-ತಾಯಿಯರ ಜವಾಬ್ದಾರಿಯಾಗಿದೆ ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ ಹೇಳಿದರು.
ತಾಲೂಕಿನ ಹಲಗಡಿಕೊಪ್ಪದಲ್ಲಿ ತಾಲೂಕು ಕರೆ ಒಕ್ಕಲಿಗರ ಸಂಘ ಬುಧವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಅವರು ಆಶೀರ್ವಚನ ನೀಡಿದರು. ಮಕ್ಕಳಿಗೆ ಯಾವ ಕ್ಷೇತ್ರದಲ್ಲಿ ಆಸಕ್ತಿ ಇದೆಯೊ ಅದೇ ಕ್ಷೇತ್ರದಲ್ಲಿ ಓದಲು ಇಲ್ಲವೇ ಕೆಲಸ ಮಾಡಲು ಪ್ರೋತ್ಸಾಹಿಸಬೇಕು. ಮಕ್ಕಳು ಕೂಡ ತಮ್ಮ ಭವಿಷ್ಯವನ್ನು ತಾವೇ ರೂಪಿಸಿಕೊಳ್ಳಬೇಕು. ನಮ್ಮಲ್ಲಿ ಯಾವ ಕ್ಷೇತ್ರವೂ ಕೀಳಲ್ಲ. ಮೇಲಲ್ಲ. ಆಸಕ್ತಿ ಇದ್ದಲ್ಲಿ ಪ್ರೋತ್ಸಾಹಿಸಿದರೇ ಮಕ್ಕಳು ಹೆಚ್ಚಿನ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದರು.
ಶಾಸಕ ಭೀಮಣ್ಣ ನಾಯ್ಕ ಮಾತನಾಡಿ, ಮಕ್ಕಳು ಹೆಚ್ಚಿನ ಓದಿನ ಮೂಲಕ ಸಾಧನೆಯ ಹಾದಿ ತುಳಿಯಬೇಕು ಎಂದರು.
ರಾಜ್ಯ ಚುಂಚಾದ್ರಿ ಮಹಿಳಾ ಪ್ರತಿಷ್ಠಾನದ ಕಾರ್ಯದರ್ಶಿ ಭಾರತಿ ರಾಮಕೃಷ್ಣ ಮಾತನಾಡಿ, ಸಿದ್ದಾಪುರದಲ್ಲಿಯೂ ಚುಂಚಾದ್ರಿ ಮಹಿಳಾ ವೇದಿಕೆ ರಚನೆ ಮಾಡಲಾಗುವುದು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಪಿಯುಸಿ ಹಾಗೂ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ. 85ಕ್ಕಿಂತ ಹೆಚ್ಚು ಅಂಕ ಪಡೆದ ಸಮಾಜದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಮಿರ್ಜಾನ್ ಶಾಖಾ ಮಠದ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ, ವೆಂಕಟೇಶ ರಾಮದಾಸ ಕಾಂತು, ಸಂಘದ ಗೌರವಾಧ್ಯಕ್ಷ ಮಹಾಬಲೇಶ್ವರ ಗೌಡ ಮೇಲಿನಸರಕುಳಿ, ಅಧ್ಯಕ್ಷ ಸುಬ್ರಾಯ ಗೌಡ ಕುಳಿಕಟ್ಟು, ಉಪಾಧ್ಯಕ್ಷ ಅಮ್ಮು ಗೌಡ, ತನುಜಾ ರಂಗಸ್ವಾಮಿ, ಸೀತಾರಾಮ ಗೌಡ ಕುಳ್ಳೆ, ನಾಗಪತಿ ಗೌಡ, ಇತರರಿದ್ದರು.
ಶಂಕರ ಗೌಡ ಬಡ್ಡೆಮನೆ, ರವೀಶ ಗೌಡ, ಸಂತೋಷ ಗೌಡ, ಅಕ್ಷತಾ ತಿರುಮಲ ಗೌಡ, ರವೀಶ ಗೌಡ ಕಾರ್ಯಕ್ರಮ ನಿರ್ವಹಿಸಿದರು.