

ನೆಲಮಂಗಲ: ಮಕ್ಕಳು ದೇಶದ ಭವಿಷ್ಯ. ಮಕ್ಕಳು ಸನ್ನಡತೆ ಕಲಿತು ದೇಶ ಪ್ರಗತಿ ಪಥದಲ್ಲಿ ಸಾಗಲು ಕಾರಣಕರ್ತರಾಗಬೇಕು ಎಂದು ಪವಾಡ ಶ್ರೀ ಬಸವಣ್ಣ ದೇವರ ಮಠದ ಶ್ರೀ ಸಿದ್ದಲಿಂಗಸ್ವಾಮೀಜಿ ತಿಳಿಸಿದರು.
ನಗರದ ಪವಾಡ ಬಸವಣ್ಣ ದೇವರ ಮಠದಲ್ಲಿ ಬಸವೇಶ್ವರ ಆಂಗ್ಲ ಶಾಲೆಯಿಂದ ಶುಕ್ರವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಹಾಗೂ ಮಕ್ಕಳ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಪಂಡಿತ ಜವಹರಲಾಲ್ ನೆಹರು ಜನ್ಮದಿನವನ್ನು ಮಕ್ಕಳ ದಿನವಾಗಿ ಆಚರಿಸಲಾಗುತ್ತಿದೆ.
ಮಕ್ಕಳನ್ನು ಪ್ರೀತಿ, ಅಭಿಮಾನದಿಂದ ನೋಡುವ ಮೂಲಕ ಅವರ ವರ್ತನೆಯಲ್ಲಿ ಬದಲಾವಣೆ ತರಬಹುದು. ಅವರ ಅಭಿರುಚಿಗೆ ಅನುಗುಣವಾಗಿ ಪಠ್ಯೇತರ ಚಟುವಟಿಕೆಗಳಲ್ಲಿ ಉತ್ತೇಜನ ನೀಡಬೇಕು. ಜತೆಗೆ ಮಕ್ಕಳು ದೇಶಕ್ಕಾಗಿ ಶ್ರಮಿಸಿದ ಮಹನೀಯರ ತತ್ವಾದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು.
ಮಕ್ಕಳೇ ಅತಿಥಿಗಳು... ಶಿಕ್ಷಕರು, ಪಾಲಕರೇ ಪೇಕ್ಷಕರು
ವಿದ್ಯಾರ್ಥಿಗಳೇ ಅತಿಥಿಗಳು, ವಿದ್ಯಾರ್ಥಿಗಳೇ ಅಧ್ಯಕ್ಷರು, ಮಕ್ಕಳಿಂದಲೇ ನಿರೂಪಣೆ, ಪ್ರೇಕ್ಷಕರಾದ ಶಿಕ್ಷಕರು....ಹೀಗೆ ವಿಶಿಷ್ಟವಾದ ಕಾರ್ಯಕ್ರಮವನ್ನು ಮಕ್ಕಳ ದಿನಾಚರಣೆ ಪ್ರಯುಕ್ತ ಶಾಲೆಯಲ್ಲಿ ಈ ಬಾರಿ ವಿಶೇಷವಾಗಿ ಆಚರಿಸಲಾಯಿತು. ವಿದ್ಯಾರ್ಥಿಗಳೇ ಸಂಪೂರ್ಣ ಕಾರ್ಯಕ್ರಮ ಪ್ರಸ್ತುಪಡಿಸಿದರು. ಮುಖ್ಯ ಅತಿಥಿಯಾಗಿ 2ನೇ ತರಗತಿಯ ನಿಖಿಲ್, 4ನೇ ತರಗತಿಯ ಎ.ದಿಯಾ, 7ನೇ ತರಗತಿಯ ಸುಜಿತ್‌ಸಾಯಿ, ಪೂಜಾಪೌಲ್ ಭಾಗವಹಿಸಿ ಮಕ್ಕಳ ದಿನಾಚರಣೆಯ ಮಹತ್ವ ಕುರಿತು ಮಾತನಾಡಿ ಗಮನ ಸೆಳೆದರು.
ವೇಷಭೂಷಣ, ಸಾಂಸ್ಕೃತಿಕ ಕಾರ್ಯಕ್ರಮ
ಪುಟ್ಟ ಮಕ್ಕಳು ಒನಕೆ ಓಬವ್ವ, ಕಿತ್ತೂರು ರಾಣಿ ಚೆನ್ನಮ್ಮ, ಯೋಧ, ಶ್ರೀಕೃಷ್ಣ, ಭಾರತ ಮಾತೆಯ ವೇಷ ತೊಟ್ಟು ಮಿಂಚಿದರೆ, ಪಾಲಕರು ಮಕ್ಕಳ ಪ್ರತಿಭೆ ಕಣ್ತುಂಬಿಕೊಂಡರು.
ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳು ನಡೆಸಿಕೊಟ್ಟರು.