ಧರ್ಮದ ಹೆಸರಿನಲ್ಲಿ ಗೆಲ್ಲುವವರಿಗೆ ಪಾಠ ಕಲಿಸಿ

ಸೋಮವಾರಪೇಟೆ ಸಮೀಪದ ಐಗೂರು ಜಂಕ್ಷನ್‌ನಲ್ಲಿ 10 ಕೋಟಿ ರೂ., ವೆಚ್ಚದಲ್ಲಿ ನಿರ್ಮಾಣಗೊಳ್ಳುವ ಸೇತುವೆ ಸಂಬಂಧ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಶಾಸಕ ಡಾ.ಮಂತರ್‌ಗೌಡ ಅವರಿಂದ ಮಾಹಿತಿ ಪಡೆದರು. ನಳಿನಿ ಇದ್ದರು.
ಸೋಮವಾರಪೇಟೆ ಸಮೀಪದ ಐಗೂರು ಜಂಕ್ಷನ್‌ನಲ್ಲಿ 10 ಕೋಟಿ ರೂ., ವೆಚ್ಚದಲ್ಲಿ ನಿರ್ಮಾಣಗೊಳ್ಳುವ ಸೇತುವೆ ಸಂಬಂಧ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಶಾಸಕ ಡಾ.ಮಂತರ್‌ಗೌಡ ಅವರಿಂದ ಮಾಹಿತಿ ಪಡೆದರು. ನಳಿನಿ ಇದ್ದರು.
Published on

ಸೋಮವಾರಪೇಟೆ: ಜಿಲ್ಲೆಯಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸದೆ ಧರ್ಮದ ಹೆಸರಿನಲ್ಲಿ ಚುನಾವಣೆಯನ್ನು ಗೆಲ್ಲುತ್ತಿದ್ದವರಿಗೆ ಇನ್ನು ಮುಂದೆಯೋ ಮತದಾರರು ಪಾಠ ಕಲಿಸಬೇಕು. ಅಭಿವೃದ್ಧಿಯನ್ನು ನೋಡಿ ಮತದಾನ ಮಾಡಬೇಕು ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.

ವಿರಾಜಪೇಟೆ-ಬೈಂದೂರು ರಾಜ್ಯ ಹೆದ್ದಾರಿಯ ಐಗೂರು ಗ್ರಾಮದ ಜಂಕ್ಷನ್‌ನಲ್ಲಿ 10 ಕೋಟಿ ರೂ., ವೆಚ್ಚದ ನೂತನ ಸೇತುವೆ ನಿರ್ಮಾಣಕ್ಕೆ ಶನಿವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ರಾಜ್ಯ ಸರ್ಕಾರ ಸುಭದ್ರವಾಗಿದೆ. ಮೂರು ವರ್ಷ ಆಡಳಿತ ನಡೆಸಲಿದೆ. ವಿರೋಧ ಪಕ್ಷದವರ ಅಪಪ್ರಚಾರಕ್ಕೆ ಕಿವಿಕೊಡಬೇಡಿ. ಜಿಲ್ಲೆಯಲ್ಲಿ ಸಾಕಷ್ಟು ರಸ್ತೆ ಅಭಿವೃದ್ಧಿಗೆ ಬೇಡಿಕೆ ಇದೆ. ಎಲ್ಲ ರಸ್ತೆಗಳೂ ಉತ್ತಮವಾಗಿರಬೇಕೆಂಬ ಚಿಂತನೆಯೊಂದಿಗೆ ಇಲಾಖೆ ಕೆಲಸ ಮಾಡುತ್ತಿದೆ. ಎಲ್ಲ ಬೇಡಿಕೆಗಳನ್ನು ಹಂತಹಂತವಾಗಿ ಈಡೇರಿಸಲಾಗುವುದು ಎಂದರು.

ಸ್ವಾತಂತ್ರ್ಯ ಪೂರ್ವದಲ್ಲಿಯೇ ನಿರ್ಮಾಣ ಮಾಡಿರುವ ಸೇತುವೆ 100 ವರ್ಷಗಳಿಗೂ ಹೆಚ್ಚಿನ ಕಾಲ ಬಾಳಿಕೆ ಬಂದಿದ್ದು, ಈಗ ಆಧುನಿಕ ಯೋಜನೆಗಳನ್ನು ಬಳಸಿಕೊಂಡು ಇನ್ನೂ ಹೆಚ್ಚಿನ ವರ್ಷಗಳು ಜನರ ಉಪಯೋಗಕ್ಕೆ ಬರುವಂತಹ ಸೇತುವೆ ನಿರ್ಮಾಣ ಮಾಡುವ ಮೂಲಕ ಇತಿಹಾಸದಲ್ಲಿ ಉಳಿಯುವಂತಾಗಬೇಕು ಎಂದರು.

ಜಿಲ್ಲೆಯಲ್ಲಿ ಬುದ್ಧ, ಬಸವಣ್ಣ, ಡಾ. ಅಂಬೇಡ್ಕರ್, ನಾರಾಯಣ ಗುರು ಸೇರಿದಂತೆ ಸಾಧಕರ ಪುಸ್ತಕಗಳನ್ನು ಓದುವಂತಹ ಪರಿಸ್ಥಿತಿ ನಿರ್ಮಾಣ ಮಾಡುವ ಮೂಲಕ ಪುಸ್ತಕ ಕ್ರಾಂತಿ ಮಾಡಬೇಕಾಗಿದೆ ಎಂದರು.

ಶಾಸಕ ಡಾ.ಮಂತರ್ ಗೌಡ ಮಾತನಾಡಿ, ಬ್ರಿಟಿಷರು ಆಡಳಿತ ನಡೆಸುತ್ತಿದ್ದ ಸಂದರ್ಭ ಲಾರ್ಡ್ ಲೂಯಿಸ್ 1837ರಲ್ಲಿ ನಿರ್ಮಿಸಿದ್ದ ಸೇತುವೆ ಈಗ ಶಿಥಿಲಗೊಂಡಿರುವುದರಿಂದ ನೂತನ ಸೇತುವೆ ನಿರ್ಮಾಣಕ್ಕೆ ಮುಂದಾಗಲಾಗಿದೆ. ರಾಜ್ಯ ಸರ್ಕಾರ ಜಿಲ್ಲೆಯಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿ ಕಾಮಗಾರಿಗಳನ್ನು ಮಾಡುತ್ತಿದ್ದು, ಯೋಜನೆಗಳ ಯಶಸ್ವಿಗೆ ಸ್ಥಳೀಯರು ಸಹಕಾರ ಮುಖ್ಯವಾಗಿದೆ ಎಂದು ಹೇಳಿದರು. ಕಾಮಗಾರಿಗಳು ಕಳಪೆಯಾಗಬಾರದು ಎಂದು ಗುತ್ತಿಗೆದಾರರಿಗೆ ಸೂಚಿಸಿದರು.

ವೇದಿಕೆಯಲ್ಲಿ ಐಗೂರು ಗ್ರಾಪಂ ಅಧ್ಯಕ್ಷ ವಿನೋದ್, ರಾಜ್ಯ ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಮೆಹರೋಝ್ ಖಾನ್, ಕಾಂಗ್ರೆಸ್ ಸಮಿತಿ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ, ಮಾಜಿ ಎಂಎಲ್ಸಿ ವೀಣಾ ಅಚ್ಚಯ್ಯ, ಪ್ರಮುಖರಾದ ಎಚ್.ಎಸ್. ಚಂದ್ರಮೌಳಿ, ವಿ.ಪಿ. ಶಶಿಧರ್, ಕೆ.ಎ. ಯಾಕೂಬ್, ಅಧೀಕ್ಷಕ ಇಂಜೀನಿಯರ್ ಕೆ.ಎನ್. ನಳಿನಿ, ಕೊಡಗು ಜಿಲ್ಲಾ ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಇಂಜಿನೀಯರ್ ಎಂ.ಪಿ. ಮುತ್ತಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net