

ವಿಜಯವಾಣಿ ಸುದ್ದಿಜಾಲ ಧಾರವಾಡ
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದಿಂದ ವೀರಶೈವ ಪದ ತೆಗೆಯಬೇಕೆಂದು ಕೆಲ ಖಾವಿಧಾರಿಗಳು ಹಾಗೂ ದುಷ್ಟ ಬುದ್ಧಿ ಜನರು ಸಮಾಜದ ದಾರಿ ತಪ್ಪಿಸುತ್ತಿದ್ದು, ಬಸವಾದಿ ಶರಣರ ವಚನಗಳಲ್ಲೇ ವೀರಶೈವ ಪದವಿದೆ ಎಂಬುದನ್ನು ತಿಳಿದುಕೊಳ್ಳಲಿ ಎಂದು ನವನಗರದ ಕಾಶಿ ಶಾಖಾ ಮಠದ ಡಾ.ರಾಜಶೇಖರ ಶಿವಾಚಾರ್ಯರು ಹೇಳಿದರು.
ನಗರದ ಹೊಸಯಲ್ಲಾಪುರದ ಮಳೆಮಲ್ಲೇಶ್ವರ ಸಂಸ್ಥಾನ ಹಿರೇಮಠದಲ್ಲಿ ಏರ್ಪಡಿಸಿದ್ದ ರೇಣುಕಾಚಾರ್ಯ ಜಯಂತಿ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.
ಪಂಚಪೀಠಗಳು, ಬಸವಾದಿ ಶರಣರು ಬೇರಲ್ಲ. ಒಂದೇ ನಾಣ್ಯದ ಮುಖಗಳು ಇದ್ದಂತೆ. ಇಬ್ಬರೂ ವೀರಶೈವ ಲಿಂಗಾಯತ ಧರ್ಮಕ್ಕೆ ಅಂತಹ ಶಕ್ತಿ ನೀಡಿದವರು. ಸರಿಯಾಗಿ ಅಧ್ಯಯನ ಮಾಡದೆ ಸಮಾಜವನ್ನು ದಾರಿ ತಪ್ಪಿಸುವ ಕಾರ್ಯ ಈ ಹಿಂದೆ ಮಾಡಿದ್ದ ಮಾತೆ ಮಹಾದೇವಿಗೆ ತಕ್ಕ ಶಿಕ್ಷೆಯಾಯಿತು. ಈಗ ಅದೇ ಮಾದರಿಯ ಜನರು ವೀರಶೈವ ಪದ ತೆಗೆದುಹಾಕಬೇಕು ಎಂಬುದಾಗಿ ಹೇಳುತ್ತಿದ್ದು, ಅವರಿಗೆ ಪಾಠ ಕಲಿಸುವ ಕಾರ್ಯವಾಗಬೇಕು ಎಂದರು.
ಹಿರೇಮಠದ ಶಶಾಂಕ ಸ್ವಾಮೀಜಿ ಮಾತನಾಡಿ, ವಿರೋಧ ರಹಿತರು, ಎಲ್ಲವನ್ನು ಸ್ವಾಗತ ಮಾಡುವವರು ಹಾಗೂ ಧರ್ಮದಿಂದ ನಡೆಯುವವರು ವೀರಶೈವರು. ಅಂತಹ ವೀರಶೈವ ಧರ್ಮ ಸ್ಥಾಪನೆ ಮಾಡಿದ ರೇಣುಕಾಚಾರ್ಯರು ಸಮಸ್ತ ಮಾನವ ಕುಲಕ್ಕೆ ಜಯವಾಗಲಿ ಎಂದಿದ್ದಾರೆ. ಸಮಾಜದ ಎಲ್ಲ್ಲರೊಂದಿಗೆ ಪ್ರೀತಿ -ವಿಶ್ವಾಸದಿಂದ ನಡೆದುಕೊಳ್ಳಬೇಕು ಎಂದರು.
ಹಿರೇಮಠದ ಗದಿಗಯ್ಯ ಸ್ವಾಮೀಜಿ, ಕರಡಿಗುಡ್ಡದ ಚೆನ್ನಬಸವ ಸ್ವಾಮೀಜಿ, ಸಿ.ಎನ್. ಹಿರೇಮಠ, ಶಕುಂತಲಾ ಹಿರೇಮಠ, ಶಂಕರ ಶೇಳಕರ, ಬಸವರಾಜ ಕುರಹಟ್ಟಿಮಠ, ಇತರರು ಇದ್ದರು. ಇದಕ್ಕೂ ಪೂರ್ವದಲ್ಲಿ ರೇಣುಕಾಚಾರ್ಯರ ಭಾವಚಿತ್ರದ ಮೆರವಣಿಗೆ ನಡೆಯಿತು.
ಮಂಜುನಾಥ ಹಿರೇಮಠ ಸ್ವಾಗತಿಸಿದರು. ಸರೋಜಾ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜೇಂದ್ರ ಹಿರೇಮಠ, ವಂದಿಸಿದರು.